ಬೆಂಗಳೂರು, ಜ 21 – ಅಬಕಾರಿ ಇಲಾಖೆಯಲ್ಲಿ ನಾನು ಮಾಡುವುದು ಏನೂ ಇಲ್ಲ. ಹಾಗಾಗಿ ಬೇರೆ ಖಾತೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದು, ಪರಿಶೀಲನೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ನೂತನ ಅಬಕಾರಿ ಸಚಿವ ಎಂ.ಟಿ.ಬಿ ನಾಗರಾಜ ಹೇಳಿದ್ದಾರೆ.
ಸಚಿವ ಸುಧಾಕರ ನಿವಾಸದಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರದಲ್ಲಿ ವಸತಿ ಸಚಿವನಾಗಿದ್ದೆ. ಬಡವರಿಗೆ ಮನೆಗಳನ್ನು ಕೊಡುವುದು, ನಿವೇಶನ ಕೊಡುವುದು, ಮನೆ ಕಟ್ಟಿಕೊಡುವುದು ಈ ರೀತಿಯ ಕೆಲಸಗಳಿದ್ದವು. ಅದರಲ್ಲಿ ಎರಡು ನಿಗಮಗಳು ಕೂಡ ಇದ್ದವು. ಕೊಳಗೇರಿ ಮತ್ತು ಹೌಸಿಂಗ್ ಬೋರ್ಡ್ ಇದ್ದವು. ಸ್ಲಮ್ ಬೋರ್ಡ ಅಡಿ ಮನೆ ಕಟ್ಟಿಕೊಡುವುದು, ಕೊಳಗೇರಿ ಅಭಿವೃದ್ಧಿ ಮಾಡುವುದು, ಹೌಸಿಂಗ್ ಬೋರ್ಡ ಅಡಿ ನಿವೇಶನ ಹಂಚಿಕೆ ಮಾಡಿಕೊಡುವ ಕೆಲಸ ಇತ್ತು. ಹಾಗಾಗಿ ಈಗ ಮುಖ್ಯಮಂತ್ರಿಗಳಿಗೆ ಅಬಕಾರಿ ಖಾತೆ ಬೇಡ ಎಂದು ಹೇಳಿ ಬಂದಿದ್ದೇನೆ ಎಂದರು.
ಅಬಕಾರಿ ಇಲಾಖೆಯಲ್ಲಿ ನಾನು ಮಾಡುವ ಕೆಲಸ ಏನಿದೆ?. ಅಬಕಾರಿ ಇಲಾಖೆ ಮದ್ಯವನ್ನು ಯಾವುದೋ ಕಂಪನಿಗಳಿಂದ ಖರೀದಿ ಮಾಡಲಿದೆ. ನಂತರ ಅಂಗಡಿಗಳಿಗೆ ಡೀಲರ್ ಗಳಿಗೆ ಹೋಲ್ ಸೇಲ್ ದರದಲ್ಲಿ ಕೊಡುತ್ತದೆ. ಅವರು ಮಾರಾಟ ಮಾಡುತ್ತಾರೆ, ಹಣವನ್ನು ಸರ್ಕಾರಕ್ಕೆ ಕೊಡುತ್ತಾರೆ. ಅಲ್ಲಿ ನಾನು ಮಾಡುವ ಕೆಲಸ ಏನು ಇಲ್ಲ ಹಾಗಾಗಿ ನಾನು ಆ ಖಾತೆಯನ್ನು ಬೇಡ ಎಂದು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ. ಮುಖ್ಯಮಂತ್ರಿಗಳು ನೋಡೋಣ ಎಂದಿದ್ದಾರೆ ಎಂದರು.
ಸಾರ್ವಜನಿಕರಿಗೆ, ಬಡವರಿಗೆ ಒಳ್ಳೆಯದಾಗಬೇಕು ಆ ರೀತಿಯ ಖಾತೆ ಕೊಡಿ ಎಂದು ಕೇಳಿದ್ದೆ. ವಸತಿ ಖಾತೆಗಿಂತ ಒಳ್ಳೆಯ ಖಾತೆ ಕೊಡುವುದಾಗಿ ಐದಾರು ಬಾರಿ ಮುಖ್ಯಮಂತ್ರಿ ಭರವಸೆ ಕೊಟ್ಟಿದ್ದರು. ಆದರೆ ಈಗ ಅಬಕಾರಿ ಖಾತೆ ಕೊಟ್ಟಿದ್ದಾರೆ. ಈ ಖಾತೆಯಲ್ಲಿ ನಾನು ಕೆಲಸ ಮಾಡುವುದು ಏನೂ ಇಲ್ಲ. ಹಾಗಾಗಿ ಬೇಡ ಎಂದು ಹೇಳಿ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.