ಬೆಂಗಳೂರು, 22- ಹಳೆಯ ಬಸ್ ಗಳನ್ನು ಗುಜರಿಗೆ ಹಾಕದೇ ಅವುಗಳನ್ನು ಪ್ರಯಾಣಿಕರ ಟಾಯ್ಲೆಟ್ ಗಳನ್ನಾಗಿ ಪರಿವರ್ತಸಲು ಸರಕಾರ ಚಿಂತನೆ ನಡೆಸಿದೆ. ಹಳೆ ಬಸೊಂದನ್ನು ಈ ಥರ ಟಾಯ್ಲೆಟ್ ಆಗಿ ಪರಿವರ್ತಸಿ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಬಳಸಲಾಗುತ್ತಿದ್ದು, ರಾಜ್ಯದ ಉಳಿದ ಭಾಗಗಳಲ್ಲೂ ವಿಸ್ತರಿಸುವ ಸಾಧ್ಯತೆಯಿದೆ.
ಮೆಜೆಸ್ಟಿಕ್ ಕೆ ಎಸ್ ಆರ್ ಟಿ ಸಿಯ ಕೆಂಪೇಗೌಡ ಬಸ್ ನಿಲ್ದಾಣದ ಒಂದನೇ ಟರ್ಮಿನಲ್ ಪ್ರವೇಶ ದ್ವಾರದ ಸಮೀಪ ಸ್ತ್ರೀಯರ ವಿಶೇಷ ಶೌಚಾಲಯವಿದೆ.
ಕೆ ಎಸ್ಆರ್ ಟಿ ಸಿಯ ಹಳೆಯ ಬಸ್ಸನ್ನು ಹೈಟೆಕ್ ಶೌಚಾಲಯವಾಗಿ ಪರಿವರ್ತಿಸಲಾಗಿದೆ. ಸುಮಾರು 12 ಮೀಟರ್ ಉದ್ದದ ಬಸ್ಸಿನಲ್ಲಿ ಇಂಡಿಯನ್ ಮತ್ತು ವೆಸ್ಟರ್ನ್ ಶೌಚಾಲಯಗಳಿವೆ.
ಹೊಸ ಐಡಿಯಾ ಉಪಯೋಗಿಸಿ ಅನುಪಯುಕ್ತ ಬಸ್ಸನ್ನು ಬಳಸಿಕೊಂಡು ಅತ್ಯಾಧುನಿಕ ಶೌಚಾಲಯ ನಿರ್ಮಾಣ ಮಾಡಿದ ಹೆಗ್ಗಳಿಕೆ ರಸ್ತೆ ಸಾರಿಗೆ ನಿಗಮದ್ದಾಗಿದೆ. ಬಸ್ಸನ್ನು ಬಳಸಿಕೊಂಡು ಶೌಚಾಲಯ ನಿರ್ಮಾಣ ಮಾಡಿದ ಮೊದಲ ದೇಶದ ಮೊದಲ ರಸ್ತೆ ಸಾರಿಗೆ ನಿಗಮವಾಗಿದೆ.
ನಟಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ಅಧ್ಯಕ್ಷೆ ಆಗಿರುವ ಶ್ರುತಿ ಇತ್ತೀಚೆಗೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸ್ತ್ರೀ ಶೌಚಾಲಯ ಪರಿಶೀಲನೆ ನಡೆಸಿದರು.
ಕೆ ಎಸ್ ಆರ್ ಟಿ ಸಿ ನಿಗಮ ಬಸ್ ಅನ್ನು ಬಳಸಿ ನಿರ್ಮಿಸಿರುವ ವಿಶೇಷ ಸ್ತ್ರೀ ಶೌಚಾಲಯದ ಬಳಕೆ ಹಾಗೂ ಮಹಿಳೆಯರಿಗೆ ಆಗುವ ಅನುಕೂಲದ ಬಗ್ಗೆ ಮಾಹಿತಿ ಪಡೆದರು. ಇದೇ ಸಮಯದಲ್ಲಿ ಮಾತನಾಡಿ ಸ್ತ್ರೀ ಶೌಚಾಲಯಗಳ ಅವಶ್ಯಕತೆ ಬಹಳಷ್ಟು ಇದೆ. ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಬೇಕು ಎಂದು ಹೇಳಿದರು.