ಬೆಳಗಾವಿ, ಜನವರಿ 24 – ಸವದತ್ತಿ ತಾಲೂಕಿನ ಚಚಡಿ ಕ್ರಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳಾ ಪಿಎಸ್ಐ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಬೆಳಗಾವಿ ಮಹಿಳಾ ಪೊಲೀಸ್ ಠಾಣೆಯ ಪಿಎಸ್ಐ ಲಕ್ಷ್ಮೀ ಪವಾರ, ಪ್ರಸಾದ ಪವಾರ, ಅಂಕಿತಾ ಪವಾರ ಹಾಗೂ ದೀಪಾ ಶಹಾಪುರಕರ ಮೃತಪಟ್ಟಿದ್ದಾರೆ.
ಕೆಎಸ್ಆರ್ಟಿಸಿ ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಢಿಕ್ಕಿಯಾಗಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು ಅವರೆಲ್ಲರೂ ಬೆಳಗಾವಿಯ ಸಹ್ಯಾದ್ರಿ ನಗರದ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸಂಬಂಧಿಕರ ಮನೆಗೆ ಹೋಗಿ ಕಾರಿನಲ್ಲಿ ಬೆಳಗಾವಿಗೆ ವಾಪಸ್ ಆಗುತ್ತಿದ್ದಾಗ ಚಚಡಿ ಕ್ರಾಸ್ ಬಳಿ ಈ ದುರಂತ ಸಂಭವಿಸಿದೆ. ಸರ್ಕಾರಿ ಬಸ್ ಬೆಳಗಾವಿಯಿಂದ ಯರಗಟ್ಟಿಯತ್ತ ಹೊರಟಿತ್ತು ಎನ್ನಲಾಗಿದೆ.
ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಲ್ಲದೇ ಕಾರು ಬಸ್ ಅಡಿಯಲ್ಲಿ ಸಿಲುಕಿತ್ತು, ನಂತರ ಕ್ರೇನ್ ಸಹಾಯದ ಮೂಲಕ ಕಾರು ಹೊರ ತೆಗೆದು, ಶವಗಳನ್ನು ಹೊರ ತೆಗೆಯಲಾಯಿತು.