ನವದೆಹಲಿ, ಜನವರಿ 25- ಭಾರತ ಮತ್ತು ಚೀನಾ ಸೇನಾ ಪಡೆಗಳ ನಡುವೆ ಮತ್ತೊಮ್ಮೆ ನಕುಲಾದಲ್ಲಿ ಸಂಘರ್ಷ ಜರುಗಿದ್ದು ಹಲವು ಯೋಧರಿಗೆ ಗಾಯಗಳಾಗಿವೆ ಎಂದು ಸರ್ಕಾರಿ ಮೂಲಗಳು ಹೇಳಿವೆ.
ಪೂರ್ವ ಲಡಾಖ್ ನ ವಾಸ್ತವ ಗಡಿ ನಿಯಂತ್ರಣ ರೇಖೆಯ ಪ್ರಸ್ತುತ ಇರುವ ಸೇನಾ ಬಿಕ್ಕಟ್ಟಿನ ಸ್ಥಳದಿಂದ ಸಾವಿರಾರು ಕಿಮೀ ದೂರದಲ್ಲಿರುವ ಸಿಕ್ಕಿಂನ ನಕುಲಾದಲ್ಲಿ ಈ ಘಟನೆ ಜರುಗಿದೆ.
ಮೂರು ದಿನಗಳ ಹಿಂದೆ ಭಾರತದ ಗಡಿ ಭಾಗದೊಳಗೆ ಚೀನೀ ಪಡೆಗಳು ಒಳನುಸುಳುವ ಪ್ರಯತ್ನದ ವೇಳೆ ಈ ಸಂಘರ್ಷ ನಡೆದಿದೆ. ಭಾರತದ ಪಡೆಗಳು ಈ ಒಳನುಸುಳುವ ಪ್ರಯತ್ನವನ್ನು ತಡೆದಿದ್ದು, ಸಂಘರ್ಷದ ಕಾರಣ ಎರಡೂ ದೇಶಗಳ ಸೈನಿಕರಿಗೆ ಗಾಯಗಳಾಗಿವೆ ಎಂದೂ ವರದಿಯಾಗಿದೆ.
ಸದ್ಯ ಪರಿಸ್ಥತಿ ಹತೋಟಿಯಲ್ಲಿದೆ.
ಈ ಸಂಘರ್ಷದ ಸಂದರ್ಭದಲ್ಲಿ ಯಾವುದೇ ಬಂದೂಕು-ಗುಂಡುಗಳ ಬಳಕೆಯಾಗಿಲ್ಲ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಮೂಲಗಳು ತಿಳಿಸಿವೆ. ಎಪ್ರಿಲ್-ಮೇ ತಿಂಗಳಿನಿಂದ ಎಲ್ಎಸಿಯ ಪೂರ್ವ ಲಡಾಖಿನ ವಿವಿಧ ಪ್ರದೇಶಗಳಲ್ಲಿ ಬಿಕ್ಕಟ್ಟು ತಲೆದೋರಿದ್ದು ಆದರೆ ಈ ಬಾರಿ ನಕುಲಾ ದಲ್ಲಿ ಘರ್ಷಣೆ ಉಂಟಾಗಿದೆ.
ಭಾನುವಾರ ಭಾರತ ಮತ್ತು ಚೀನಾದ ಕಮಾಂಡರ್ ಮಟ್ಟದ 9ನೇ ಸುತ್ತಿನ ಮಾತುಕತೆ ನಡೆದಿದ್ದರೂ ಅದಕ್ಕೂ ಮೊದಲು ಈ ಸಂಘರ್ಷ ಸಂಭವಿಸಿದ್ದು ಹೆಚ್ಚಿನ ಮಾಹಿತಿ ಇನ್ನೂ ಬರಬೇಕಿದೆ.