ಮತ್ತೆ ಗಣತಂತ್ರ ದಿನ ಬಂದಿದೆ. ಭಾರತ ವಿಸ್ತಾರ ಮತ್ತು ವಿವಿಧತೆಯ ದೇಶ. ಇಲ್ಲಿ ವಿವಿಧ ಸಂಸ್ಕøತಿ, ಭಾಷೆ ಇದ್ದರೂ ಯಾವುದೋ ಒಂದು ಬಂಧದಲ್ಲಿ ಏಕತೆ ಇದೆ. ಅದನ್ನೇ ವೈವಿಧ್ಯತೆಯಲ್ಲಿ ಏಕತೆ ಎಂದು ಹಿಂದಿನವರು ಕರೆದರು. ಗಣತಂತ್ರ ನಮ್ಮ ದೇಶದ ಸ್ವರೂಪ ನಿರ್ಧರಿಸುವ ಬಹುಮುಖ್ಯ ಅಂಶ, ಇದನ್ನು ಕೊಡಮಾಡಿದ್ದು ನಮ್ಮ ಸಂವಿಧಾನ. ಅದು ಜಾರಿಗೆ ಬಂದ ದಿನವೇ ನಮ್ಮ ಗಣತಂತ್ರ ದಿವಸ. ದೇಶದ ಸರ್ವಾಂಗೀಣ ಅಭಿವೃದ್ಧಿ ಮತ್ತು ಸಾಂಸ್ಕøತಿಕ ವೈಭವವನ್ನು ಜಗತ್ತಿಗೆ ಸಾರಿ ಹೇಳುವ ಒಂದು ಕಾರ್ಯಕ್ರಮ ರಾಜಧಾನಿ ದೆಹಲಿಯಲ್ಲಿ ಪ್ರತಿವರ್ಷ ಹಮ್ಮಿಕೊಳ್ಳಲಾಗುತ್ತದೆ. ಆದರೆ ಆ ಕಾರ್ಯಕ್ರಮದ ಹಿಂದೆ ಇರುವ ಆಶಯಗಳನ್ನು ನಾವು ಮರೆಯುತ್ತಾ ಇದ್ದೇವೆ ಎಂದು ಅನ್ನಿಸುತ್ತಿದೆ.
ಕಳೆದ ಕೆಲವು ವರ್ಷಗಳಿಂದ ನಮ್ಮಲ್ಲಿನ ರಾಜಕೀಯ ಪಲ್ಲಟಗಳ ಪರಿಣಾಮ ಚಿಂತನೆಯ ದಿಕ್ಕು ಬದಲಾದಂತೆ ಕಾಣುತ್ತದೆ. ಒಂದೇ ದೇಶ, ಒಂದೇ ಭಾಷೆ ಎನ್ನುವ ವಿಚಾರ ಇತ್ತೀಚೆಗೆ ಹೆಚ್ಚು ಮುನ್ನೆಲೆಗೆ ಬರುತ್ತಿದೆ. ಅದರ ಜೊತೆಗೇ, ಇನ್ನಿತರ ವಿಚಾರಗಳಲ್ಲಿಯೂ ಏಕತೆಯನ್ನು ತರಬೇಕು ಎನ್ನುವ ನಿಲುವು ಗಟ್ಟಿಗೊಳಿಸುವ ಯತ್ನ ನಡೆದದ್ದು ಕಾಣುತ್ತದೆ. ಪ್ರತಿ ಐವತ್ತು ಮೈಲಿಗೆ ಭಾಷೆ, ಉಡಿಗೆ, ಆಹಾರ ಬದಲಾಗುವ ಈ ದೇಶದಲ್ಲಿ ಏಕರೂಪದ ಜೀವನ ಶೈಲಿಯಾಗಲೀ ಮತ್ತು ಆಹಾರ, ವಿಚಾರ ಆಗಲಿ ತರುವುದು ಸುಲಭವೂ ಅಲ್ಲ, ಒಳ್ಳೆಯದೂ ಅಲ್ಲ.
ನಮ್ಮ ಹಾಗೆ ಜನತಂತ್ರ ವ್ಯವಸ್ಥೆ ಇರುವ ಅಮೇರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಕೇಂದ್ರದಿಂದ ರಾಜ್ಯಗಳ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಕಡಿಮೆ. ನಮ್ಮಲ್ಲಿ ಗಣತಂತ್ರ ವ್ಯವಸ್ಥೆ ಇದ್ದರೂ ರಾಜ್ಯಗಳು ಕೇಂದ್ರದ ಆಧೀನ ಎಂಬಂತೆಯೇ ಕೆಲಸ ಮಾಡುವ ಅನಿವಾರ್ಯತೆ ಇದೆ. ಹಣಕಾಸು, ಸೈನ್ಯ, ನ್ಯಾಯಾಂಗ ಮುಂತಾದ ವಿಭಾಗಗಳು ಕೇಂದ್ರದ ವ್ಯಾಪ್ತಿಯಲ್ಲಿ ಇದ್ದು ಅವುಗಳ ಮೂಲಕ ರಾಜ್ಯಗಳು ಹಾಗೂ ಜನರ ಮೇಲೆ ನೇರವಾಗಿ ಪ್ರಭಾವ ಬೀರುವ ಕೆಲಸ ಕೇಂದ್ರ ಮಾಡಬಹುದು. ಈಚಿನ ದಿನಗಳಲ್ಲಿ ಸಂವೈಧಾನಿಕ ಸಂಸ್ಥೆಗಳನ್ನು ಒಂದು ರೀತಿ ತನ್ನ ಹಿಡಿತಕ್ಕೆ ತೆಗೆದುಕೊಂಡು ಆ ಮೂಲಕ ಗಣತಂತ್ರ ಕಲ್ಪನೆಗೆ ವಿರುದ್ಧ ಸಂಗತಿಗಳನ್ನು ನೆಲೆಗೊಳಿಸಲು ಕೇಂದ್ರ ಯತ್ನಿಸುತ್ತಿದೆಯೇ ಎಂಬ ಅನುಮಾನ ದಟ್ಟವಾಗುತ್ತಿದೆ. ನಮ್ಮ ಸಂವಿಧಾನದ ಆಶಯಕ್ಕೆ ವಿರುದ್ಧವಾದ ಧಾರ್ಮಿಕ ಮತ್ತು ವೈಯಕ್ತಿಕ ಸ್ವಾತಂತ್ರ್ಯ ನಿಯಂತ್ರಿಸುವ ಕೆಲಸ ಕೂಡ ನಡೆಯುತ್ತಿದೆ ಎಂದು ಮೇಲು ನೋಟಕ್ಕೇ ಅನಿಸುತ್ತಿದೆ. ಈ ಬೆಳವಣಿಗೆಯನ್ನು ಗಂಭೀರವಾಗಿ ಗಮನಿಸಬೇಕು.
ಕೇಂದ್ರವು ಬಹುಪಾಲು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಹಾಗೆ ಕಾಣುತ್ತಿದೆ. ತನ್ನ ವ್ಯಾಪ್ತಿಗೆ ಬಾರದ ಕೃಷಿ ವಿಷಯದಲ್ಲಿಯೂ ಹೊಸ ಶಾಸನಗಳನ್ನು ಜಾರಿಗೆ ತರಲು ಹೊರಟಿರುವ ರೀತಿ ನೋಡಿದರೆ ಈ ಮಾತು ಅರ್ಥ ಆದೀತು. ಕೃಷಿ ಕ್ಷೇತ್ರ ರಾಜ್ಯಗಳ ವ್ಯಾಪ್ತಿಯ ವಿಷಯವೇ ಹೊರತು, ಕೇಂದ್ರದ ವ್ಯಾಪ್ತಿಗೆ ಸೇರಿದ್ದಲ್ಲ. ಆದರೆ ಕೆಲವು ಸಂಗತಿಗಳನ್ನು ಸಾಧಿಸಲು ಅನ್ಯ ಮಾರ್ಗಗಳು ಸಂವಿಧಾನದಲ್ಲಿ ಇರುತ್ತವೆ. ಜಿಎಸ್ಟಿ ಜಾರಿಗೆ ತರುವಾಗ, ಅದನ್ನು ಹಣಕಾಸು ವಿಧೇಯಕ ಎಂದು ಪರಿಗಣಿಸದೇ ಸಾಂವಿಧಾನಿಕ ಬದಲಾವಣೆ ಎನ್ನುವಂತೆ ಮಾಡಿ ಸಂಸತ್ತಿನ ಅಂಗೀಕಾರ ಗಳಿಸಿದ್ದು ಇಲ್ಲಿ ನೆನಪಿಸಿಕೊಳ್ಳಬಹುದು.
ನಮ್ಮಲ್ಲಿನ ಬಹುಮುಖ್ಯ ಸಮಸ್ಯೆ ಏನೆಂದರೆ ಬಹುಪಾಲು ಜನ ಬಡವರು ಮತ್ತು ತಮ್ಮ ದೈನಂದಿನ ಜೀವನ ಹೊರೆದುಕೊಂಡರೆ ಸಾಕು ಎಂದು ಬದುಕು ಸಾಗಿಸುವವರು. ಅಂದಂದಿನ ಎರಡು ಹೊತ್ತಿನ ಊಟ ತಮ್ಮ ತಟ್ಟೆಗಳಿಗೆ ಬೀಳುವಂತೆ ಮಾಡುವುದೇ ಅವರ ಬಹುದೊಡ್ಡ ಕಾಯಕ. ಆದರೆ ಕೆಲವೇ ಕೆಲವು ಶ್ರೀಮಂತರು ಈ ಎಲ್ಲ ಅಪಾರ ಸಂಖ್ಯೆಯ ಬಡವರ ದುಡಿಮೆಯ ಫಲವನ್ನು ಕಸಿದುಕೊಳ್ಳುವ ಹುನ್ನಾರ ನಡೆಸುತ್ತಾ ಅದರಲ್ಲಿ ಸಾಕಷ್ಟು ಸಫಲ ಆಗಿರುವುದನ್ನೂ ನಾವು ಕಾಣುತ್ತೇವೆ. ಇದು ಸಮಾಜವಾದಿ ನೆಲೆಗಟ್ಟನ್ನು ಸ್ವೀಕರಿಸಿರುವ ನಮ್ಮ ಸಂವಿಧಾನಕ್ಕೆ ವಿರುದ್ಧವಾದುದು. ಅದನ್ನು ನಿವಾರಿಸುವ ದಿಸೆಯಲ್ಲಿ ಸಾಗುವುದನ್ನು ಬಿಟ್ಟು, ಈಗಿರುವ ಬಂಡವಾಳಖೋರರ ನೆಲೆ ಗಟ್ಟಿಗೊಳಿಸುವ ದಿಸೆಯಲ್ಲಿಯೇ ಈ ಸರ್ಕಾರ ಸಾಗಿದಂತೆ ಕಾಣುತ್ತದೆ.
ಎಲ್ಲ ರೀತಿಯಿಂದ ಗಮನಿಸಿದರೂ ಸಂವಿಧಾನದ ಆಶಯಕ್ಕೆ ವಿರುದ್ಧ ಚಲನೆಗಳು ಮತ್ತು ಕ್ರಮಗಳನ್ನು ಜನರ ವಿರೋಧ ಕೂಡ ಲೆಕ್ಕಿಸದೇ ಹೇರಲ್ಪಡುತ್ತಿರುವುದು ಗಂಭೀರ ಅಪಾಯದ ಸೂಚನೆ. ಕೇಂದ್ರ ಸರ್ಕಾರ ಸಾರ್ವಭೌಮ ಅಲ್ಲ, ಇಲ್ಲಿ ರಾಜ್ಯಗಳಿಗೂ ಅಧಿಕಾರ ನಿರ್ವಹಣೆಯಲ್ಲಿ ಸಮಾನ ಪಾಲು ಇದೆ. ಅದನ್ನು ಪಡೆಯುವ ದೃಷ್ಟಿಯಿಂದ ಹಕ್ಕು ಸ್ಥಾಪಿಸುವ ಕೆಲಸ ರಾಜ್ಯಗಳಿಂದ ಆಗಬೇಕಾದ ಸ್ಥಿತಿ ನಿರ್ಮಾಣ ಆಗಿದೆ. ಆದರೆ ಬಹುಪಾಲು ರಾಜ್ಯಗಳಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸುತ್ತ ಇರುವ ಪಕ್ಷವೇ ಅಧಿಕಾರ ಪಡೆದಿರುವುದು ಇದಕ್ಕೆ ಬಹಳ ದೊಡ್ಡ ತೊಡಕು. ಪಕ್ಷದ ಆಶಯಕ್ಕೆ ವಿರುದ್ಧ ವರ್ತಿಸುವುದು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಾಧ್ಯ ಆಗದು. ಇನ್ನೊಂದೆಡೆ; ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಪಕ್ಷದಿಂದ ಹೊರತಾದ ಪಕ್ಷಗಳ ಮುಖ್ಯಮಂತ್ರಿಗಳು ರಾಜ್ಯದ ಹಕ್ಕಿನ ಬಗ್ಗೆ ಎತ್ತುವ ಸಾಂದರ್ಭಿಕ ಪ್ರಶ್ನೆಗಳನ್ನು ಬಂಡಾಯದ ಹಾಗೆ ಬಿಂಬಿಸಲಾಗುತ್ತಿದೆ. ರಾಜ್ಯಗಳ ಪರ ನಿಲ್ಲಬೇಕಾದ ಕೇಂದ್ರ, ಆ ರಾಜ್ಯವೇ ತನ್ನ ಶತ್ರುವೇನೋ ಎಂಬಂತೆ ವರ್ತಿಸುವ ಘಟನೆಗಳು ನಡೆದಿವೆ. ಅನ್ಯ ಪಕ್ಷಗಳ ನಡೆಯನ್ನು ಖಂಡಿಸುವ, ಅಲ್ಲಿಗೆ ತನ್ನದೇ ಅನುಯಾಯಿಗಳನ್ನು ರಾಜ್ಯಪಾಲರಾಗಿ ನೇಮಿಸಿ ತೊಂದರೆ ಕೊಡುವ ಕೆಲಸ ನಡೆಯುತ್ತಾ ಇರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಆ ದೃಷ್ಟಿಯಿಂದಲೇ ಈ ಬಾರಿಯ ಗಣತಂತ್ರ ದಿನದಂದು ನಮ್ಮ ಮಕ್ಕಳು ಬಾವುಟ ಹಾರಿಸಿ ಸಂಭ್ರಮ ಪಡುವ ದಿನ ಎಂದು ಭಾವಿಸಿ, ಕೇವಲ ಭೌತಿಕ ಆಚರಣೆಯಲ್ಲಿ ಮುಳುಗದಂತೆ ತಿಳಿಹೇಳಿ, ಅವರಲ್ಲಿ ಗಣತಂತ್ರದ ನಿಜ ಆಶಯಗಳೇನು, ಅದಕ್ಕೆ ಬಂದಿರುವ ಕುತ್ತೇನು ಮತ್ತು ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ಅರಿವು ಮೂಡಿಸುವುದು ಅತೀ ಅವಶ್ಯಕವಿದೆ.
-ಎ.ಬಿ.ಧಾರವಾಡಕರ
ಸಂಪಾದಕ