ಮುಂಬೈ,ಜ 25- ರಕ್ತ ಹೆಪ್ಪುಗಟ್ಟಿಸುವ ಚಳಿಯನ್ನೂ ಲೆಕ್ಕಿಸದೇ ಪಂಜಾಬ್, ಹರಿಯಾಣ ಹಾಗೂ ಉತ್ತರ ಪ್ರದೇಶದ ಅನ್ನದಾತರು ದೆಹಲಿ ಗಡಿಯಲ್ಲಿ ಕಳೆದ 60 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು ಅವರ ಸಮಸ್ಯೆಗಳೇನು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಈ ವರೆಗೆ ಒಮ್ಮೆಯಾದರೂ ವಿಚಾರಿಸಿದ್ದಾರೆಯೇ ? ಎಂದು ಎಂದು ಎನ್ ಸಿ ಪಿ ನಾಯಕ ಶರದ ಪವಾರ ಪ್ರಶ್ನಿಸಿದ್ದಾರೆ.
ಪ್ರತಿಭಟನೆ ನಡೆಸುತ್ತಿರುವ ರೈತರು ಏನಾದರೂ ನೆರೆಯ ದೇಶ ಪಾಕಿಸ್ತಾನದಿಂದ ಬಂದಿರುವವರೇ ಎಂದು ಪವಾರ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಮುಂಬೈನ ಆಜಾದ ಮೈದಾನದಲ್ಲಿ ಸೋಮವಾರ ಮಧ್ಯಾಹ್ನ ನಡೆದ ಬೃಹತ್ ರೈತರ ಸಮಾವೇಶವನ್ನು ಉದ್ದೇಶಿಸಿ ಶರದ ಪವಾರ ಮಾತನಾಡುತ್ತ, ಸಂಸತ್ತಿನಲ್ಲಿ ಕೃಷಿ ಕಾಯ್ದೆಗಳನ್ನು ಅಂಗೀಕರಿಸುವ ಮೊದಲು ಕೇಂದ್ರ ಸರ್ಕಾರ ಪ್ರತಿ ಪಕ್ಷಗಳ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಸಂಸತ್ತಿನಲ್ಲಿ ಯಾವುದೇ ಚರ್ಚೆಯಿಲ್ಲದೇ ಕಾನೂನುಗಳನ್ನು ಅಂಗೀಕರಿಸಲಾಗಿದೆ ಎಂದು ಅವರು ಆರೋಪಿಸಿದರು.
ಈ ಮಧ್ಯೆ, ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕಳೆದ ಸೆಪ್ಟೆಂಬರ್ನಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲವಾಗಿ ಮಹಾರಾಷ್ಟ್ರದ 21 ಜಿಲ್ಲೆಗಳಿಗೆ ಸೇರಿದ ರೈತರು ಸೋಮವಾರ ಬೆಳಿಗ್ಗೆ ಮುಂಬೈನ ಆಜಾದ ಮೈದಾನದಲ್ಲಿ ಮೂರು ದಿನಗಳ ಧರಣಿ ಪ್ರತಿಭಟನೆ ಆರಂಭಿಸಿದ್ದಾರೆ. ಈ ನಡುವೆ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಲು ರಾಜ್ ಭವನಕ್ಕೆ ತೆರಳುತ್ತಿದ್ದ ಸುಮಾರು 50 ಸಾವಿರ ರೈತರ ಮೆರವಣಿಗೆಯನ್ನು ಪೊಲೀಸರು ತಡೆದಿದ್ದು, ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ.