ಬೆಂಗಳೂರು,ಜ.27- ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಗುರುವಾರದಿಂದ ಪ್ರಾರಂಭವಾಗಲಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರಕ್ಕೆ ವೇದಿಕೆ ಸಜ್ಜಾಗಿದೆ.
15ನೇ ವಿಧಾನಸಭೆಯ 9ನೇ ಅಧಿವೇಶನ ಇದಾಗಿದ್ದು, ಕೋವಿಡ್ 19 ರಿಂದಾಗಿ ಸಂಪನ್ಮೂಲ ಕ್ರೋಢೀಕರಣದಲ್ಲಿ ಹಿನ್ನೆಡೆ, ಅಭಿವೃದ್ಧಿ ಕಾರ್ಯಕ್ರಮಗಳ ಕುಂಠಿತ, ಕ್ಷೇತ್ರಗಳಿಗೆ ಸಮರ್ಪಕವಾಗಿ ಹಣ ಬಿಡುಗಡೆಯಾಗದ ಕುರಿತು ಮಹತ್ವದ ಚರ್ಚೆ ನಡೆಯುವ ನಿರೀಕ್ಷೆಯಿದೆ.
ಸಚಿವ ಸಂಪುಟ ವಿಸ್ತರಣೆ, ವಲಸಿಗ ಮತ್ತು ಮೂಲ ಬಿಜೆಪಿ ನಾಯಕರ ನಡುವೆ ಆಂತರಿಕ ಕಿತ್ತಾಟ. ಖಾತೆಗಳಿಗಾಗಿ ಬಹಿರಂಗ ಗುದ್ದಾಟದ ವಿಚಾರಗಳು ಅಧಿವೇಶನದಲ್ಲಿ ಬಹಿರಂಗವಾಗಿ ಚರ್ಚೆಗೆ ಬರುವ ಸಂಭವವಿದೆ.
ಅಧಿವೇಶನಕ್ಕೆ ಅಗತ್ಯವಾದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಜ.28 ರಿಂದ ಫೆ.5ರವರೆಗೆ 7 ದಿನ ಅಧಿವೇಶನ ನಡೆಯಲಿದ್ದು, ಬೆಳಿಗ್ಗೆ ಉಭಯಸದನವನ್ನುದ್ದೇಶಿಸಿ ರಾಜ್ಯಪಾಲರು ಮಾತನಾಡಲಿದ್ದು, ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ನಡೆಸಿ, ಜ.29 ರಿಂದ ಉಳಿದ ಕಾರ್ಯಕಲಾಪ ನಡೆಯಲಿದೆ. ಬುಧವಾರ ರಾಜ್ಯಪಾಲರನ್ನು ಸ್ಪೀಕರ್ ಭೇಟಿ ಮಾಡಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಆಹ್ವಾನಿಸಿದ್ದಾರೆ.
ರಾಜ್ಯಪಾಲರ ಭಾಷಣ ಬಳಿಕ ಸಂತಾಪ ಸೂಚನೆ ಆನಂತರ ಕಲಾಪ ಮುಂದೂಡಲಾಗುತ್ತದೆ. ಶುಕ್ರವಾರದಿಂದ ಪ್ರಶ್ನೋತ್ತರ ಕಲಾಪ ಸೇರಿ ಉಳಿದ ಕಲಾಪಗಳು ನಡೆಯುತ್ತವೆ.ಈ ಬಾರಿ 11 ಮಸೂದೆಗಳು ಅಧಿವೇಶನದಲ್ಲಿ ಮಂಡನೆಯಾಗುತ್ತಿವೆ.
ಅಧಿವೇಶನ ಕುರಿತು ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ಬಾರಿ ನಗರಪಾಲಿಕೆಗಳ ಎರಡನೇ ತಿದ್ದುಪಡಿ ವಿಧೇಯಕ, ಗೋಹತ್ಯೆ ನಿಷೇಧ ಕಾಯಿದೆ ತೋಟಗಾರಿಕೆ, ಸಾಂಕ್ರಾಮಿಕ, ಮೋಟಾರುವಾಹನ, ಲೋಕಾಯುಕ್ತ 3 ನೇ ತಿದ್ದುಪಡಿ ವಿಧೇಯಕ ಬಂದಿವೆಏಟ್ರಿಯಾ ವಿವಿ, ವಿದ್ಯಾಶಿಲ್ಪ ವಿವಿ ವಿಧೇಯಕ, ಮುರುಘರಾಜೇಂದ್ರ ಟ್ರಸ್ಟ್ ವಿಧೇಯಕ ಸೇರಿದಂತೆ 11 ವಿಧೇಯಕಗಳು ಮಂಡನೆಯಾಗಲಿವೆ ಎಂದರು.
ಯಾವುದೇ ಮಸೂದೆ ಬಾಕಿ ಇದ್ದರೂ ಸಹ ಸದನದ ಗಮನಕ್ಕೆ ತರಬೇಕೆಂದು ಸರ್ಕಾರಕ್ಕೆ ಈಗಾಗಲೇ ತಿಳಿಸಿದ್ದೇವೆ. ತ್ವರಿತವಾಗಿ ಮಸೂದೆ ತಲುಪಿಸಿದಲ್ಲಿ ಸದಸ್ಯರಿಗೆ ಮಾಹಿತಿ ನೀಡಲು ಅನುಕೂಲವಾಗಲಿದೆ. ಮೇಲ್ಮನೆಯಲ್ಲಿ ಗೋಹತ್ಯೆ ನಿಷೇಧ ಕಾಯಿದೆ ಇದ್ದು, ಅಲ್ಲಿ ಮಂಡನೆಯಾದ ಬಳಿಕ ಕೆಳಮನೆಗೆ ಬರಬೇಕಾಗಿದೆ. ಗೋ ಹತ್ಯೆ ನಿಷೇಧ ವಿಧೇಯಕ ಇನ್ನೂ ವಿಧಾನ ಪರಿಷತ್ ನಲ್ಲಿ ಅಂಗೀಕಾರವಾಗುವುದು ಬಾಕಿ ಇದೆ. ಮೂರು ವಿಶ್ವವಿದ್ಯಾಲಯಗಳ ವಿಧೇಯಕ ಹಾಗು ಮೂರು ಸುಗ್ರೀವಾಜ್ಞೆಗಳ ವಿಧೇಯಕಗಳಿವೆ ಎಂದು ವಿವರಿಸಿದರು.
ಈ ಅಧಿವೇಶನದ ಸಂದರ್ಭದಲ್ಲಿಯೇ ಒಂದು ದಿನ “ಒಂದು ರಾಷ್ಟ್ರ-ಒಂದು ಚುನಾವಣೆ” ಕುರಿತು ಚರ್ಚೆಯಾಗಬೇಕಿದೆ. ಕಳೆದ ಬಾರಿಯೇ ಇದು ಚರ್ಚೆಗೆ ಬಂದಿತ್ತು. ಆದರೆ ಸಾಧ್ಯವಾಗಲಿಲ್ಲ. ಈ ಬಾರಿ ಇದನ್ನು ಚರ್ಚೆಗೆ ಎತ್ತುಕೊಳ್ಳುವ ಸಾಧ್ಯತೆಯಿದೆ ಎಂದರು.
ಕೊರೊನಾ ಹಿನ್ನೆಲೆ ಮುನ್ನಚ್ಚರಿಕೆ ವಹಿಸಿ,ಈ ಬಾರಿಯೂ ಅಧಿವೇಶನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಅಧಿವೇಶನದಲ್ಲಿ ಇದ್ದ ನಿರ್ಬಂಧ, ವ್ಯವಸ್ಥೆಗಳು ಮುಂದುವರಿಯುತ್ತದೆ. ಅನಾರೋಗ್ಯ ಇರುವವರು ಸದನಕ್ಕೆ ಹಾಜರಾಗದೇ ಇರುವುದು ಒಳ್ಳೆಯದು. ಕೋವಿಡ್ ಲಕ್ಷಣಗಳು ಇದ್ದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲೂ ವ್ಯವಸ್ಥೆ ಮಾಡಲಾಗಿದೆ. ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಅನಾರೋಗ್ಯವಿದ್ದವರು ಸದನದೊಳಗೆ ಬರುವಂತಿಲ್ಲ ಆದರೆ ಆರ್ ಟಿಪಿಸಿಆರ್ ಟೆಸ್ಟ್ ಕಡ್ಡಾಯವೇನಲ್ಲ .ಕ್ಯಾಂಟೀನ್ ವ್ಯವಸ್ಥೆ ಹೊರಗಡೆಗೆ ಮಾಡಲಾಗಿದ್ದು, ಸದಸ್ಯರ ಆಪ್ತ ಸಹಾಯಕರು, ಅಂಗರಕ್ಷಕರಿಗೆ ಬ್ಯಾಂಕ್ವೆಟ್ ಹಾಲ್ ಬಳಿ ವ್ಯವಸ್ಥೆ ಮಾಡಲಾಗಿದೆ ಎಂದರು.
ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಘಟನೆ ಕಪ್ಪುಚುಕ್ಕೆಯಾಗಿದ್ದು, ಸಮಸ್ಯೆ ಸರಿಪಡಿಸಲು ಸರ್ಕಾರ ಮುಂದಾಗಲಿದೆ. ಆದರೂ ದೆಹಲಿಯಲ್ಲಿ ನಡೆದ ಹಿಂಸಾಚಾರ ಜನರ ಮನಸ್ಸಿಗೆ ಘಾಸಿತಂದಿದೆ. ಘಟನೆಗೆ ಕಾರಣ ಯಾರು? ಪ್ರಚೋದನೆ ನೀಡಿದವರು ಯಾರೆಂಬ ಬಗ್ಗೆ ತನಿಖೆಯ ನಂತರ ಎಲ್ಲವೂ ಹೊರಬರಲಿ. ಸಂವಿಧಾನ ಮೀರಿ ನಡೆದ ಘಟನೆ ಖಂಡನೀಯವಾಗಿದ್ದು, ಇಂತಹ ಮನಸ್ಥಿತಿ ಯಾರಿಂದಲೂ ಆಗಬಾರದು. ಹೀಗಾಗಿದ್ದು ನಾವು ಒಪ್ಪಿಕೊಂಡ ಸಂವಿಧಾನಕ್ಕೆ ಮಾಡಿರುವ ಅಪಚಾರ ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು.