ಪುರಂದರ ದಾಸರ ಒಂದು ಮಾತು ಹೀಗೆ ಇದೆ ‘ಈಸಬೇಕು, ಇದ್ದು ಜೈಸಬೇಕು’. ಇದು ನೆನಪಾಗಲು ಕಾರಣ ಒಬ್ಬ ನಟಿಯ ಆತ್ಮಹತ್ಯೆ. ಆಕೆಯ ಹೆಸರು ಜಯಶ್ರೀ ರಾಮಯ್ಯ. ಕಿರುತೆರೆ ನಟಿ ಆಗಿದ್ದ ಆಕೆ, ಹೆಚ್ಚು ಕಾಲ ರೂಪದರ್ಶಿ ಆಗಿ ಕೆಲಸ ಮಾಡಿದ್ದರು. ಬಿಗ್ ಬಾಸ್ ಸ್ಪರ್ಧೆಯಲ್ಲಿ ಪಾಲ್ಗೊಂಡ ಆಕೆ ಹೆಚ್ಚು ಜನಪ್ರಿಯತೆ ಗಳಿಸಿದ್ದರು. ಕೆಲವು ತಿಂಗಳ ಹಿಂದೆ ಆಕೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ತಮಗೆ ದಯಾಮರಣ ಕೋರಿ ವಿನಂತಿಸಿದ್ದರು. ಆಗ ಕನ್ನಡದ ಕೆಲವು ನಟರು ಮತ್ತು ಆಕೆಯ ನಿಕಟ ಸಂಪರ್ಕದಲ್ಲಿ ಇದ್ದವರು ಸಮಾಧಾನ ಹೇಳಿ, ಆಕೆಯ ಮನಸ್ಸು ತಿದ್ದುವ ಕೆಲಸ ಮಾಡಿದ್ದರು. ಆಗ ಆಕೆ ಸುಧಾರಿಸಿಕೊಳ್ಳುವ ಲಕ್ಷಣ ಕಾಣುತ್ತಿತ್ತು. ಆದರೆ ಆಕೆಯಲ್ಲಿ ಕಾಣುತ್ತಿದ್ದ ಉತ್ಸಾಹವು ಕೇವಲ ತನ್ನ ಖಿನ್ನತೆ ಮುಚ್ಚಿಕೊಳ್ಳಲು ನಡೆಸಿದ ಯತ್ನ ಎಂದು ಈಗ ತಿಳಿಯುತ್ತಿದೆ ಎಂದು ಆಕೆಯ ನಿಕಟ ಸಂಪರ್ಕದಲ್ಲಿ ಇದ್ದವರು ಹೇಳುತ್ತಾರೆ. ಆಕೆ ಖಿನ್ನತೆಯಿಂದ ದೂರ ಆಗಲು ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ನೇಣಿಗೆ ಶರಣಾದರು.
ಇದು ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕಳೆದ ವರ್ಷ ಸುಶಾಂತ ಸಿಂಗ್ ರಾಜಪೂತ ಆತ್ಮಹತ್ಯೆ ಕೂಡ ಇಂಥದ್ದೇ ಚರ್ಚೆ ಹುಟ್ಟು ಹಾಕಿತ್ತು. ಕೆಲವು ವರ್ಷಗಳ ಹಿಂದೆ ತೆಲುಗು ಚಿತ್ರರಂಗದ ಅತ್ಯಂತ ಜನಪ್ರಿಯ ನಟ ಉದಯ ಕಿರಣ ಆತ್ಮಹತ್ಯೆ ಕೂಡ ಇಂಥದ್ದೇ ಸಂಚಲನ ಸೃಷ್ಟಿಸಿತ್ತು. ಜನರಿಗೆ ಹೆಚ್ಚು ಸುಪರಿಚಿತರಾದ ಇಂಥ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಳ್ಳಲು ಖಿನ್ನತೆಯೇ ಕಾರಣ ಎಂದು ತಿಳಿದು ಬರುತ್ತದೆ. ಅತಿ ಕಡಿಮೆ ಅವಧಿಯಲ್ಲಿ ಯಶಸ್ಸು, ಕೀರ್ತಿ, ಹಣ ಪಡೆದ ಇಂಥವರು ತಮ್ಮ ಸ್ಥಾನಮಾನ ಉಳಿಸಿಕೊಳ್ಳಲು ಹೆಣಗಾಡಿ, ಅದು ಸಾಧ್ಯ ಆಗದೇ ಖಿನ್ನತೆಗೆ ಜಾರುತ್ತಾರೆ. ಉದಯ ಕಿರಣ ಇದಕ್ಕೊಂದು ಸ್ಪಷ್ಟ ಉದಾಹರಣೆ. ಆತ ಮಧ್ಯಮ ವರ್ಗದ ಕುಟುಂಬದಿಂದ ಬಂದ ತರುಣ. ಆತನ ಮೊದಲ ಮೂರು ಚಿತ್ರಗಳು ಎಂಥ ಜನಪ್ರಿಯತೆ ಗಳಿಸಿದವು ಎಂದರೆ, ತೆಲುಗಿನ ಅತಿ ಪ್ರಸಿದ್ಧ ನಟ ಚಿರಂಜೀವಿಯ ಮಗಳನ್ನೇ ಮದುವೆ ಮಾಡಿ ಕೊಡುವ ಪ್ರಸ್ತಾಪ ಬಂತು. ಆದರೆ ಮುಂದಿನ ಎಲ್ಲ ಹೆಜ್ಜೆಗಳಲ್ಲಿ ಸೋತ ಉದಯ ಕಿರಣ ಗಳಿಸಿದ ಹಣ, ಕೀರ್ತಿ ಎಲ್ಲ ಕಳೆದುಕೊಂಡು ಏನು ಮಾಡುವುದು ಎಂದು ದಿಕ್ಕು ತೋಚದೇ ಆತ್ಮಹತ್ಯೆಗೆ ಶರಣಾದ. ಇದೇ ಸ್ಥಿತಿ ಸುಶಾಂತ ಸಿಂಗ್ ರಾಜಪೂತ ಕೂಡ ಅನುಭವಿಸಿದ ಎನ್ನುತ್ತಾರೆ. ಈ ಎರಡೂ ಸಂದರ್ಭದಲ್ಲಿ ಸುತ್ತಲಿನ ವಾತಾವರಣ ಮತ್ತು ಪೂರಕವಾಗಿ ನಿಲ್ಲಬೇಕಿದ್ದ ವ್ಯಕ್ತಿಗಳೇ ಅವರ ವಿರುದ್ಧ ನಿಂತದ್ದು ಖಿನ್ನತೆ ಮತ್ತು ಆನಂತರದ ದುರಂತಮಯ ನಿರ್ಧಾರಕ್ಕೆ ಕಾರಣ ಎಂದು ಹೇಳಲಾಗುತ್ತದೆ.
ಹಿಂದೊಮ್ಮೆ ನಟಿ ದೀಪಿಕಾ ಪಡುಕೋಣೆ ಅವರು ತಾನು ಖಿನ್ನತೆಗೆ ಒಳಗಾಗಿದ್ದು ಚಿಕಿತ್ಸೆ ಪಡೆದುಕೊಂಡಿದ್ದಾಗಿ ಹೇಳಿದಾಗ ಕೆಲವರು ಹುಬ್ಬೇರಿಸಿದ್ದರು. ಹಣ, ಯಶಸ್ಸು, ಕೀರ್ತಿ ಎಲ್ಲ ಗಳಿಸಿದ ಈ ಹೆಣ್ಣು ಮಗಳನ್ನೂ ಖಿನ್ನತೆ ಕಾಡಲು ಸಾಧ್ಯವೇ ಎಂದು ಅವರ ಪ್ರಶ್ನೆಯಾಗಿತ್ತು. ಯಾರಿಗೆ, ಯಾವ ಕಾರಣಕ್ಕೆ ಮಾನಸಿಕ ತೊಂದರೆ ಕಾಡುತ್ತದೆ ಎಂದು ಹೇಳಲು ಬರುವುದಿಲ್ಲ. ಬಹಳ ಸಂದರ್ಭಗಳಲ್ಲಿ ವ್ಯಕ್ತಿಯಲ್ಲಿ ಕಂಡು ಬರುವ ಬದಲಾವಣೆಯನ್ನು ಮನೆಯವರು ಮತ್ತು ಸಮಾಜ ನಿರ್ಲಕ್ಷಿಸುತ್ತದೆ ಇಲ್ಲವೇ ಗೇಲಿ ಮಾಡುತ್ತದೆ. ನಮ್ಮ ನಡುವಿನ ವ್ಯಕ್ತಿಯೊಬ್ಬ ಇದ್ದಕ್ಕಿದ್ದ ಹಾಗೆ ಮೌನಿಯಾದರೆ, ವಿನಾ ಕಾರಣ ಸಿಟ್ಟು ಮಾಡಲು ತೊಡಗಿದರೆ, ಏಕಾಂತವೇ ಹೆಚ್ಚು ಪ್ರಿಯ ಎನಿಸಿದರೆ, ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ಳಲು ಆರಂಭಿಸಿದರೆ, ನಿದ್ದೆಗೇಡಾದರೆ ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಬದಲಿಗೆ ಅವರಲ್ಲಾದ ಪರಿವರ್ತನೆಯನ್ನೇ ಛೇಢಿಸುವ ಪ್ರವೃತ್ತಿ ಹೆಚ್ಚು. ಮಾತಿಲ್ಲವಾದರೆ ಮೂದೇವಿ ಎನ್ನುವುದು, ಸಿಟ್ಟು ಜೋರಾದರೆ ಬಾಯಿ ಬಡುಕ ಎನ್ನುವುದು, ಏಕಾಂತ ಬಯಸಿದರೆ ಗೂಬೆ ಎನ್ನುವುದು ಎಲ್ಲ ನಡೆಯುತ್ತದೆ. ಇದರರ್ಥ ಇಷ್ಟೇ, ನಮ್ಮಲ್ಲಿ ಮಾನಸಿಕ ಸ್ಥಿತ್ಯಂತರವನ್ನು ಗಂಭೀರವಾಗಿ ಪರಿಗಣಿಸುವ ಪ್ರವೃತ್ತಿ ಇಲ್ಲ.
ಮೊದಲಿನ ಹಾಗೆ ಅವಿಭಕ್ತ ಕುಟುಂಬಗಳು ಈಗ ಇಲ್ಲ. ಮನೆಗಳಲ್ಲಿ ತಂದೆ ತಾಯಿ, ಒಂದು ಮಗು ಸಾಮಾನ್ಯ. ಆ ಮಗುವಿನ ಆಶೋತ್ತರಗಳೇನು, ಅದರ ಸಾಮಥ್ರ್ಯ ಏನು ಎಂದು ತಂದೆ ತಾಯಿ ಪರಿಗಣಿಸುವುದೂ ಇಲ್ಲ. ತಮ್ಮ ಆಶಯಗಳನ್ನು ಆತ ಅಥವಾ ಆಕೆಯ ಮೇಲೆ ಹೇರುತ್ತಾ ಹೋಗುತ್ತಾರೆ. ಇಂಥ ಸ್ಥಿತಿಯಲ್ಲಿ ಆ ವ್ಯಕ್ತಿಗೆ ಸ್ವಂತ ತಂದೆ ತಾಯಿಗಳೇ ಶತ್ರುಗಳಂತೆ ಅನಿಸುತ್ತಾರೆ. ತನ್ನ ಸಂಕಟ ಅವರಲ್ಲಿ ಹೇಳಿಕೊಳ್ಳಲು ಸಾಧ್ಯ ಇಲ್ಲ. ಇನ್ನು ಗೆಳೆಯರು ಅಥವಾ ಪರಿಚಿತರ ಮುಂದೆ ಹೇಳಿಕೊಂಡರೆ ಆಪತ್ತನ್ನು ಖುದ್ದು ಆಹ್ವಾನಿಸಿದಂತೆ.
ಪಾಶ್ಚಿಮಾತ್ಯ ದೇಶಗಳಲ್ಲಿ ದೈಹಿಕ ಆರೋಗ್ಯದ ತಪಾಸಣೆ, ಚಿಕಿತ್ಸೆಗೆ ಗಮನ ನೀಡುವಂತೆಯೇ ಮಾನಸಿಕ ಆರೋಗ್ಯದ ಬಗ್ಗೆಯೂ ಗಮನ ನೀಡಲಾಗುತ್ತದೆ. ಅಲ್ಲಿ ಯಾರಿಗೋ ಮಾನಸಿಕ ತೊಂದರೆ ಇದೆ ಎಂದರೆ ಅದು ಬೆಚ್ಚಿ ಬೀಳುವ ಅಥವಾ ನಿರ್ಲಕ್ಷಿಸುವ ಸಂಗತಿ ಅಲ್ಲ. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಲು ಸಲಹೆ, ಮಾರ್ಗದರ್ಶನ ನೀಡುವ ದವಾಖಾನೆಗಳು ಇವೆ. ತನಗೆ ಇಂಥ ತೊಂದರೆ ಇದೆ ಎಂದು ವ್ಯಕ್ತಿ ತಾನು ಕೆಲಸ ಮಾಡುವ ಸಂಸ್ಥೆಗೆ ತಿಳಿಸಲು ಅಥವಾ ಮನೆಯಲ್ಲಿ ಹೇಳಲು ಸಂಕೋಚ ಮಾಡಿಕೊಳ್ಳುವುದಿಲ್ಲ. ನಮ್ಮಲ್ಲಿನ ಸ್ಥಿತಿ ಬೇರೆಯೇ ಇದೆ. ಕೆಲವು ದೈಹಿಕ ರೋಗಗಳ ಬಗ್ಗೆ ಈಗಲೂ ತಪ್ಪು ಕಲ್ಪನೆ ಇರುವ ನಮ್ಮಲ್ಲಿ ಮಾನಸಿಕ ಅನಾರೋಗ್ಯ ಎಂದ ಕೂಡಲೇ ನಮ್ಮ ಪ್ರತಿಕ್ರಿಯೆ ತೀರಾ ವಿಕೃತವಾಗುತ್ತದೆ. ವಿಷಯ ತಿಳಿದ ಕೂಡಲೇ ತಾವೊಂದು ಮಹತ್ವದ ಸಂಗತಿ ಕಂಡು ಹಿಡಿದವರಂತೆ ತಮಗೆ ಗೊತ್ತಿರುವ ಎಲ್ಲರಿಗೂ ಉಪ್ಪು ಖಾರ ಸೇರಿಸಿ ತಿಳಿಸಲು ತೊಡಗುತ್ತಾರೆ. ಇವರೆಲ್ಲರ ದೃಷ್ಟಿಯಲ್ಲಿ ಕೀಳಾಗುವ ವ್ಯಕ್ತಿ ಸುಧಾರಿಸಿಕೊಳ್ಳುವ ಬದಲು ಕುಗ್ಗುತ್ತಾನೆ. ತನಗೆ ಯಾರೂ ಇಲ್ಲ ಅನಿಸಿದ ಘಳಿಗೆ ಆತನ ಮುಂದೆ ಉಳಿಯುವ ದಾರಿ ಒಂದೇ ಎನಿಸುತ್ತದೆ.
ತೀರಾ ಆಧುನಿಕರಾಗಿದ್ದೇವೆ ಎಂದು ಹೇಳಿಕೊಳ್ಳುವ ನಾವು ಮೂಲತಃ ಸ್ವಭಾವದಲ್ಲಿ ಬದಲಾಗಿಲ್ಲ. ಮಾನಸಿಕ ಏರುಪೇರು ಮತ್ತು ಮಾನಸಿಕ ಚಿಕಿತ್ಸೆಗೆ ಒಳಗಾಗಿದ್ದಾನೆ ಎಂದ ಕೂಡಲೆ ನಮ್ಮ ಮನಸ್ಸುಗಳಲ್ಲಿ ಬರುವ ಚಿತ್ರ ಒಂದೇ. ಎಷ್ಟೋ ವೇಳೆ ಮನೆಯವರಿಗೆ ಕೂಡ ತಮ್ಮ ಮನೆಯ ಸದಸ್ಯ ಇಂಥದೊಂದು ತೊಂದರೆಯಿಂದ ಬಳಲುತ್ತಿದ್ದಾನೆ ಎಂದು ಕೂಡ ಗೊತ್ತಿರುವುದಿಲ್ಲ. ಹಳ್ಳಿಗಾಡಲ್ಲಿಯಂತೂ ಇಂಥ ವ್ಯಕ್ತಿಗಳಿಗೆ ಯಮವೈದ್ಯ ಚಿಕಿತ್ಸೆ ಕೊಡಿಸಿ ಮತ್ತಷ್ಟು ಅನಾಹುತ ಸೃಷ್ಟಿಸುತ್ತಾರೆ. ನಾವು ಬದಲಾಗಬೇಕಿದೆ, ನಮ್ಮಲ್ಲಿ ಹೆಚ್ಚು ತಿಳಿವಳಿಕೆ ಮೂಡಬೇಕಿದೆ. ಹಾಗಾದಾಗ ಮಾತ್ರ ಅಮಾಯಕ ಜೀವಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪೀತು.