ನವದೆಹಲಿ, ಜ 28 – ಕೊರೋನಾ ಅನ್ ಲಾಕ್ ಬಳಿಕ ಜಾರಿಗೆ ತಂದಿದ್ದ, ಚಿತ್ರಮಂದಿರಗಳಲ್ಲಿ ಕೇವಲ ಶೇಕಡ 50ರಷ್ಟು ಸೀಟು ಬಳಕೆ ನಿಯಮವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.
ಫೆಬ್ರವರಿ ತಿಂಗಳಿನಿಂದಲೇ ಹಲವು ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಗೆ ಬಹುತೇಕ ಸಿನಿಮಾಗಳು ಸಾಲುಗಟ್ಟಿ ನಿಂತಿರುವ ಸಂದರ್ಭದಲ್ಲಿ ಈ ನಿಯಮಾವಳಿ ಹಿಂಪಡೆದಿರುವುದು ಚಿತ್ರರಂಗದ ಪಾಲಿಗೆ ಸಿಹಿ ಸುದ್ದಿಯಾಗಿದೆ.
ಚಿತ್ರಮಂದಿರಗಳಲ್ಲಿ ಶೇಕಡಾ 100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡುವಂತೆ ಆಂಧ್ರ-ತೆಲಂಗಾಣ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳು ಕೆಲವು ವಾರಗಳ ಹಿಂದೆ ಮನವಿ ಮಾಡಿದ್ದವು. ತಮಿಳುನಾಡು ಸರ್ಕಾರವು ನ್ಯಾಯಾಲಯದ ಮೆಟ್ಟಿಲನ್ನೂ ಏರಿತ್ತು.
ಪೂರ್ಣ ಸೀಟು ಸಾಮರ್ಥ್ಯದಷ್ಟು ಪ್ರೇಕ್ಷಕರಿಗೆ ಅವಕಾಶ ಕೊಟ್ಟಮೇಲೂ ಮಾಸ್ಕ್ ಬಳಕೆ, ಚಿತ್ರಮಂದಿರಗಳ ಒಳಹೋಗುವ ಮುನ್ನಾ ಸ್ಯಾನಿಟೈಸರ್ ಬಳಕೆ, ಚಿತ್ರಮಂದಿರಗಳ ಸ್ವಚ್ಛತೆ ಇನ್ನುಳಿದ ಸ್ವಚ್ಛತಾ ಸಂಬಂಧಿ ವಿಷಯಗಳ ಬಗ್ಗೆ ಹೊಸ ಸೂಚನೆಗಳನ್ನು ಗೃಹ ಸಚಿವಾಲಯ ನೀಡುವ ಸಂಭವ ಇದೆ.
“ಚಿತ್ರಮಂದಿರಗಳು ತಮ್ಮ ಪೂರ್ಣ ಸೀಟು ಸಾಮರ್ಥ್ಯದಷ್ಟು ಪ್ರೇಕ್ಷಕರಿಗೆ ಒಮ್ಮೆಲೆ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಬಹುದಾಗಿದೆ. ಪೂರ್ಣ ಸೀಟು ಸಾಮರ್ಥ್ಯದಷ್ಟು ಪ್ರೇಕ್ಷಕರಿಗೆ ಸಿನಿಮಾ ನೀಡಲು ಅವಕಾಶ ನೀಡುವ ಬಗ್ಗೆ ಪ್ರತ್ಯೇಕ ಎಸ್ಒಪಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಅನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಬಿಡುಗಡೆ ಮಾಡಲಾಗುವುದು ಎಲ್ಲ ಚಿತ್ರಮಂದಿರಗಳು ಅದನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ” ಎಂದು ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ.