ನವದೆಹಲಿ, ಜ 28- ಉತ್ತರ ಪ್ರದೇಶ ಸರ್ಕಾರ ಒಂದೊಮ್ಮೆ ತಮ್ಮ ಬಳಿಗೆ ಭದ್ರತಾ ಪಡೆಗಳನ್ನು ಕಳುಹಿಸಿದರೆ ನೇಣು ಹಾಕಿಕೊಳ್ಳುವುದಾಗಿ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ ಟಿಕಾಯತ್ ದೆಹಲಿಯಲ್ಲಿ ಎಚ್ಚರಿಸಿದ್ದಾರೆ.
ಗುರುವಾರ ಅವರು ದೆಹಲಿ ಗಡಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಸರ್ಕಾರ ತಮ್ಮ ವಿರುದ್ಧ ಎಷ್ಟೇ ಪ್ರಕರಣಗಳನ್ನು ದಾಖಲಿಸಿದರೂ, ತಾವು ಶರಣಾಗುವ ಪ್ರಶ್ನೆಯೇ ಇಲ್ಲ, ಬಂದೂಕಿನ ಗುಂಡುಗಳನ್ನು ಎದುರಿಸಲು ನಾವು ಸಿದ್ದರಿದ್ದೇವೆ ಎಂದು ತಿಳಿಸಿದ್ದಾರೆ.
ಗಣರಾಜ್ಯೋತ್ಸವದಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಘಟನೆ ರೈತರಿಗೆ ಕೆಟ್ಟ ಹೆಸರು ತಂದಿದೆ, ಘಟನೆ ಸಂಬಂಧ ದೆಹಲಿ ಪೊಲೀಸರು 37 ರೈತ ಸಂಘ ಮುಖಂಡರ ವಿರುದ್ಧ 22 ಎಫ್ಐಆರ್ ದಾಖಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಕೇಶ ಟಿಕಾಯತ್ ಮಾತನಾಡಿ, “ಕೆಲವು ಮಂದಿ ಕೆಂಪು ಕೋಟೆ ಏರಿ ಧ್ವಜ ಹಾರಿಸಿದರು? ಆ ಸಮಯದಲ್ಲಿ ಪೊಲೀಸರು ಏಕೆ ಗುಂಡಿನ ದಾಳಿ ನಡೆಸಲಿಲ್ಲ? ಆ ಸಮಯದಲ್ಲಿ ಪೊಲೀಸರು ಎಲ್ಲಿಗೆ ಹೋಗಿದ್ದರು? ಅಸಲಿಗೆ ದೀಪ ಸಿದ್ಧು ಅಲ್ಲಿಗೆ ಹೇಗೆ ತೆರಳಲು ಸಾಧ್ಯವಾಯಿತು? ಧ್ವಜವನ್ನು ಹಾರಿಸಿದ ನಂತರ ಆತನನ್ನು ಪೊಲೀಸರು ಏಕೆ ಹಿಡಿಯಲಿಲ್ಲ ? ಈ ವರೆಗೆ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ ? ‘ ಎಂಬ ಪ್ರಶ್ನೆಗಳ ಸುರಿಮಳೆ ಹರಿಸಿದ್ದಾರೆ.
“ನಾವು ಶಾಂತಿಯುತವಾಗಿ ಕೋರ್ಟ್ ಆರೆಸ್ಟ್ ಆಗಲು ಬಯಸಿದ್ದವು. ಆದರೆ, ಕೆಲವರು ಪ್ರತಿಭಟನೆಯಿಂದ ಹಿಂದಿರುಗುವಾಗ ಹಿಂಸಾಚಾರದಲ್ಲಿ ತೊಡಗಲು ನೋಡುತ್ತಿದ್ದರು. ಅಂತಹ ಯಾವುದೇ ಯೋಜನೆ ಇದ್ದರೆ ನಾನು ಇಲ್ಲಿಯೇ ಇರುತ್ತೇನೆ. ಗುಂಡೇಟು ತಿನ್ನಲು ಸಹ ಸಿದ್ಧ ”ಎಂದು ಅವರು ಟಿಕಾಯತ್ ಹೇಳಿದರು.
ರೈತರು ಪ್ರತಿಭಟನೆ ನಡೆಸುತ್ತಿರುವ ಪ್ರದೇಶಗಳನ್ನು ತೆರವುಗೊಳಿಸುವಂತೆ ಉತ್ತರ ಪ್ರದೇಶದ ಯೋಗಿ ಅದಿತ್ಯ ನಾಥ್ ಸರ್ಕಾರ ಎಲ್ಲ ಜಿಲ್ಲಾಧಿಕಾರಿಗಳು, ಎಸ್ಪಿಗಳಿಗೆ ನಿರ್ದೇಶನ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಉತ್ತರ ಪ್ರದೇಶ ಸರ್ಕಾರ ದೆಹಲಿಯ ಗಡಿಗೆ ಭದ್ರತಾ ಪಡೆಗಳನ್ನು ಕಳುಹಿಸಲು ನೋಡುತ್ತಿದೆ. ನಮ್ಮ ಬಳಿಗೆ ಒಂದೊಮ್ಮೆ ಭದ್ರತಾ ಪಡೆ ಕಳುಹಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಸರ್ಕಾರ ಉದ್ದೇಶಪೂರ್ವಕವಾಗಿ ನಮ್ಮ ವಿರುದ್ದ ಮೊಕದ್ದಮೆ ಹೂಡುತ್ತಿದೆ. ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ಶರಣಾಗುವುದಿಲ್ಲ. ಕೆಂಪು ಕೋಟೆಯ ಬಳಿ ನಡೆದ ಘಟನೆಗೆ ಸಂಬಂಧಿಸಿದಂತೆ ‘ಕಾಲ್ ಡೇಟಾ’ ಬಹಿರಂಗವಾಗಬೇಕು.. ಅಗತ್ಯಬಿದ್ದರೆ ಗ್ರಾಮಗಳಿಂದ ಹೆಚ್ಚಿನ ಜನರು ಬಂದು ಪ್ರತಿಭಟನೆ ನಡೆಸಲಿದ್ದಾರೆ. ದೇಶದ ಮುಂದೆ ದೀಪ್ ಸಿದ್ದು ವಿಷಯ ಬಹಿರಂಗಪಡಿಸಬೇಕು. ಈ ಬಗ್ಗೆ ಸುಪ್ರೀಂ ಕೋರ್ಟ ಸಮಿತಿಯಿಂದ ವಿಚಾರಣೆ ನಡೆಸಬೇಕು ಎಂದು ರಾಕೇಶ ಟಿಕಾಯತ್ ಆಗ್ರಹಿಸಿದರು.