ನವದೆಹಲಿ, ಜ 29 – ದೆಹಲಿಯ ಸಿಂಘು ಗಡಿಯಲ್ಲಿ ಜನರ ಗುಂಪೊಂದು ಆಂದೋಲನ ನಡೆಸುತ್ತಿರುವ ರೈತರ ಮೇಲೆ ಹಲ್ಲೆ ನಡೆಸಿದ್ದು, ಈ ವೇಳೆ ಹಲವಾರು ಜನರು ಗಾಯಗೊಂಡಿದ್ದಾರೆ.
ರೈತರ ಮೇಲೆ ಹಲ್ಲೆ ನಡೆದ ನಂತರ ಎರಡು ಗುಂಪುಗಳ ನಡುವೆ ಘರ್ಷಣೆ ಆರಂಭವಾಗಿ ಪರಸ್ಪರ ಕಲ್ಲು ತೂರಾಟ ನಡೆಯಿತು. ಈ ವೇಳೆ ಲಾಠಿ ಚಾರ್ಜ ಮತ್ತು ಅಶ್ರುವಾಯು ಪ್ರಯೋಗಿಸಿ ಗುಂಪು ಚದುರಿಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂಸಾಚಾರದಲ್ಲಿ ಅಲಿಪುರ ಎಸ್ಎಚ್ಒ ಪ್ರದೀಪ ಪಾಲಿವಾಲ, ಪ್ರತಿಭಟನಾ ನಿರತ ರೈತರು ಮತ್ತು ಇತರರು ಗಾಯಗೊಂಡಿದ್ದಾರೆ. ಸ್ಥಳೀಯರು ಎಂದು ಹೇಳಿಕೊಳ್ಳುವ ಜನರ ಗುಂಪು ಪ್ರತಿಭಟನಾ ಸ್ಥಳಕ್ಕೆ ಪ್ರವೇಶಿಸಿ ಗಡಿ ರಸ್ತೆಯನ್ನು ಖಾಲಿ ಮಾಡುವಂತೆ ರೈತರನ್ನು ಒತ್ತಾಯಿಸಿ ಹಲ್ಲೆ ನಡೆಸಿದಾಗ ಘರ್ಷಣೆ ಸಂಭವಿಸಿದೆ.
ಎರಡು ತಿಂಗಳಿಗಿಂತ ಹೆಚ್ಚು ಕಾಲದಿಂದ ಹೊಸದಾಗಿ ಜಾರಿಗೆ ತರಲಾದ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.