ಬೆಂಗಳೂರು, ಜ 30 – ಕೋವಿಡ್ ಸೋಂಕು ವ್ಯಾಪಿಸಿದ ಸಮಯದಿಂದಲೂ ಎಲ್ಲರಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚಿಕೊಳ್ಳುವ ನಿಟ್ಟಿನಲ್ಲಿ ಸಿಕ್ಕಾಪಟ್ಟೆ ಜಾಗೃತಿ ಬರುತ್ತಿದೆ. ಈ ಭರದಲ್ಲಿ ಹಲವರು ಅಗತ್ಯಕ್ಕಿಂತ ಹೆಚ್ಚಾಗಿ ಮತ್ತು ಅವೈಜ್ಞಾನಿಕವಾಗಿ ರೋಗನಿರೋಧಕ ಪದಾರ್ಥಗಳನ್ನ ಸೇವಿಸುತ್ತಿರುವುದು ಕಂಡುಬರುತ್ತಿದೆ. ಆದರೆ ಇದೆಂಥಾ ಅಪಾಯಕಾರಿ ಎಂಬುದನ್ನು ಯಾರೂ ಯೋಚಿಸುತ್ತಲೇ ಇಲ್ಲ.
ಈ ಕುರಿತು ಮಾತನಾಡಿದ ರೈನ್ ಬೋ ಮಕ್ಕಳ ಆಸ್ಪತ್ರೆಯ ರೂಮಟಾಲಜಿ ತಜ್ಞೆ ಡಾ ಚಂದ್ರಿಕಾ ಭಟ್,”ಕೋರೊನಾ ಕಾಣಿಸಿಕೊಂಡ ನಂತರ ನಮ್ಮಲ್ಲೆಲ್ಲಾ ರೋಗ ನಿರೋಧಕತೆ ಹೆಚ್ಚಿಸುವ ಪದಾರ್ಥಗಳನ್ನು ಸೇವಿಸುವದಕ್ಕೆ ಮಹತ್ವ ಕೊಡಲಾರಂಭಿಸಿದ್ದೇವೆ. ಕಳೆದ 15-20 ವರ್ಷಗಳ ಅಂಕಿ ಅಂಶಗಳನ್ನು ಪರಿಗಣಿಸುವದಾದರೆ ಹೆಚ್ಚಿನ ಪ್ರಮಾಣದ ರೋಗ ನಿರೋಧಕ ಪದಾರ್ಥ ಸೇವಿಸುವ ಮೂಲಕ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಉಂಟಾಗುತ್ತಿರುವುದು ಕಂಡುಬಂದಿದೆ. ಇದರರ್ಥ ಅತೀಯಾಗಿ ರೋಗ ನಿರೋಧಕ ಪದಾರ್ಥ ಸೇವಿಸುವುದು ಕೂಡಾ ಸಾಕಷ್ಟು ಅಪಾಯಕ್ಕೆ ಹಾದಿ ಮಾಡಿಕೊಡುತ್ತದೆ ಎನ್ನುತ್ತಾರೆ.
ಸೂಕ್ಷ್ಮವಾಗಿ ಗಮನಿಸುವುದಾದರೆ ತೀರಾ ಕಡಿಮೆ ಪ್ರಮಾಣದ ಜನ ಮಾತ್ರ ಸಣ್ಣ ಜ್ವರ ಬಂದರೂ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಾರೆ, ಆದರೆ ಬಹುಪಾಲು ಜನ ಸುಲಭವಾಗಿ ಗುಣಮುಖರಾಗಿಬಿಡುತ್ತಾರೆ. ಹಾಗಾದರೆ ಯಾಕೆ ಕೆಲವರು ಮಾತ್ರ ಈ ರೀತಿಯ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುವುದು? ಯಾಕೆ ಕೆಲವೇ ಜನ ಸಂಧಿವಾತದಂತಹ ಸಮಸ್ಯೆಗೆ ತುತ್ತಾಗುವುದು? ಇವುಗಳೇ ನಮ್ಮ ರೋಗ ನಿರೋಧಕ ಶಕ್ತಿ ಹೇಗೆ ದೇಹವನ್ನು ನಾಶ ಮಾಡುತ್ತವೆ ಎಂಬುದಕ್ಕೆ ಉದಾಹರಣೆಗಳು ಎನ್ನುತ್ತಾರೆ.
ಡಾ ಚಂದ್ರಿಕಾ ಅವರು ಹೇಳುವಂತೆ, ಇದರಿಂದಾಗಿಯೇ ಮಕ್ಕಳ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಉಂಟಾಗುತ್ತಿರುವುದು. ಮಕಳಲ್ಲಿ ಮೊದಲ 5 ವರ್ಷದವರೆಗೆ ಅವರ ರೋಗ ನಿರೋಧಕ ವ್ಯವಸ್ಥೆಯು ಸಾಕಷ್ಟು ಎಳಸಾಗಿರುತ್ತದೆ. ರೋಗ ನಿರೋಧಕ ವ್ಯವಸ್ಥೆಯನ್ನು ನೀವು ಒಂದು ಸೈನ್ಯಕ್ಕೆ ಹೋಲಿಸುವುದಾದರೆ ಸೈನಿಕರು, ಶಸ್ತ್ರಾಸ್ತ್ರಗಳ ರೀತಿಯಲ್ಲಿ ಇದು ಇರುತ್ತದೆ. ಸಹಜ ಪರಿಸ್ಥಿತಿಯಲ್ಲಿ ಇವುಗಳ ಕೆಲಸ ಹೊರಗಿನವರಿಂದ ತಮ್ಮ ರಾಜ್ಯವನ್ನು ಸಂರಕ್ಷಿಸುವುದಾಗಿರುತ್ತದೆ. ಯೋಚಿಸಿ ಒಂದು ವೇಳೆ ಅವರು ಅತೀ ಸಕ್ರಿಯಗೊಂಡು ಕೇವಲ ವೈರಿಗಳ ಮೇಲಷ್ಟೇ ಅಲ್ಲ ತಮ್ಮ ರಾಜ್ಯದವರ ಮೇಲೆಯೂ ದಾಳಿಮಾಡಲಾರಂಭಿಸಿದರೆ ಏನಾಗಬಹುದೆಂದು. ಇದರ ಪರಿಣಾಮ ಲೆಕ್ಕವಿಲ್ಲದಷ್ಟು ಸಾವು ನೋವುಗಳು ಸಂಭವಿಸುತ್ತವೆ. ಇದೇ ರೀತಿ ನಮ್ಮ ರೋಗ ನಿರೋಧಕ ವ್ಯವಸ್ಥೆಯು ನಮ್ಮ ದೇಹದ ಮೇಲೆಯೇ ದಾಳಿ ಮಾಡಿದರೆ ಹಲವು ಅಂಗಾಂಗಳಿಗೆ ಹಾನಿಯುಂಟಾಗುತ್ತದೆ.
ಒಂದು ವೇಳೆ ಕೀಲುಗಳಲ್ಲಿ ನೋವು ಕಾಣಿಸಿಕೊಂಡರೆ ಅದನ್ನು ಅರ್ಥರೈಟಿಸ್ ಎಂದು ಕರೆಯಲಾಗುತ್ತದೆ. ಅದೇ ಕಣ್ಣುಗಳಿಗೆ ತೊಂದರೆಯಾದರೆ ಅದನ್ನ ಯುವೆಟಿಸ್ ಎನ್ನಲಾಗುತ್ತದೆ, ಹೀಗೆ ಆಯಾ ಅಂಗಗಳಿಗೆ ಸಂಬಂಧಿಸಿದಂತೆ ಆಯಾ ಹೆಸರಿನಿಂದ ಕರೆಯಲಾಗುವುದು. ಆದರೆ ಇಲ್ಲಿ ಸಮಸ್ಯೆ ಆ ಅಂಗಗಳದ್ದಾಗಿರುವುದಿಲ್ಲ. ಇದಕ್ಕೆ ಮುಖ್ಯ ಕಾರಣವೇ ರೋಗನಿರೋಧಕ ವ್ಯವಸ್ಥೆ. ಮಕ್ಕಳಲ್ಲಿ ಇದು ಮುಖ್ಯವಾಗಿ ದೀರ್ಘ ಸಮಯದ ಜ್ವರ, ಬಾವು ಜೊತೆಗೆ ಸಂಧಿವಾತ, ಸ್ನಾಯು ನೋವು, ಕಣ್ಣು ಹಾಗೂ ತುಟಿಗಳು ಕೆಂಪಾಗುವುದು, ಅತೀಯಾದ ಬಳಲುವಿಕೆ, ಬಾಹ್ಯ ಅಲ್ಸರ್, ತೂಕ ಕಳೆದುಕೊಳ್ಳುವುದು ಅಥವಾ ಮಾನಸಿಕ ಕ್ಷೋಭೆ ಸೇರಿದಂತೆ ಈ ಎಲ್ಲಾ ಲಕ್ಷಣಗಳು ಮಕ್ಕಳಲ್ಲಿ ಕಂಡುಬಂದರೆ ಪಾಲಕರು ಕೂಡಲೇ ಎಚ್ಚೆತ್ತುಕೊಳ್ಳಬೇಕು. ಕಾರಣ ಇವು ರೂಮಟಾಲಜಿ ಕಾಯಿಲೆಯ ಲಕ್ಷಣಗಳಾಗಿರುತ್ತವೆ. ಮಕ್ಕಳ ರೂಮಟಾಲಜಿ ವೈದ್ಯರು ಇಂಥಹ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸುತ್ತಾರೆ.