ಬೆಂಗಳೂರು, ಜ 30 – ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎಲ್ಲಾ ಪ್ರಯತ್ನ ಮಾಡಬೇಕು. ಬಿಜೆಪಿ ವಿರುದ್ದ ಹೋರಾಟ ಮಾಡುವುದು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಇದಕ್ಕೆ ಕಾರ್ಯಕರ್ತರು ಸಂಕಲ್ಪ ಮಾಡಬೇಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ರಾಷ್ಟ್ರಿಪಿತ ಮಹಾತ್ಮ ಗಾಂಧಿ ಪುಣ್ಯತಿಥಿ ಹುತಾತ್ಮ ದಿನ ಆಚರಿಸಲಾಯಿತು. ಹುತಾತ್ಮ ದಿನಾಚರಣೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭಾ ಸದಸದ ಮಲ್ಲಿಕಾರ್ಜುನ್ ಖರ್ಗೆ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ಹಾಗೂ ಸಲಿಂ ಅಹಮದ ಸೇರಿದಂತೆ ಮತ್ತಿತ್ತರು ಪಾಲ್ಗೊಂಡು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಮಾತನಾಡಿ, ಪ್ರಸಕ್ತ ದೇಶದಲ್ಲಿ ಜಾತಿ ಜಾತಿ ನಡುವೆ ಸಂಘರ್ಷ ಮಾಡಿ ಸಾಮರಸ್ಯವನ್ನು ಬಿಜೆಪಿ ಹಾಳು ಮಾಡುತ್ತಿದೆ. ಇವರಿಂದಾಗಿ ದೇಶದಲ್ಲಿ ಯಾರೂ ನೆಮ್ಮದಿಯಿಂದ ಇಲ್ಲ. ರೈತರು, ಕಾರ್ಮಿಕರ ವಿರುದ್ಧದ ಕಾನೂನುಗಳನ್ನು ಬಿಜೆಪಿ ತಂದಿದೆ. ದೇಶದಲ್ಲಿ ಇನ್ನೂ ಸಾಮರಸ್ಯ ನೆಲಸಿಲ್ಲ. ನಾಥೂರಾಮ್ ಗೂಡ್ಸೆಯನ್ನು ಪೂಜಿಸುವ ಕೆಲಸವಾಗುತ್ತಿದೆ. ಇದಕ್ಕಿಂತ ಬೇರೆ ದೇಶದ್ರೋಹದ ಕೆಲಸವಿಲ್ಲ ಎಂದರು.
ದೇಶದಲ್ಲಿ ಸ್ವಾತಂತ್ರ್ಯಗೋಸ್ಕರ ಸಂಘಪರಿವಾರದ ಯಾರೊಬ್ಬರೂ ಬಲಿದಾನ ಮಾಡಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಬಿಜೆಪಿಯವರ ಕೊಡುಗೆ ಏನು? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಯಾರ ವಿರುದ್ಧ ಮಹಾತ್ಮ ಗಾಂಧೀಜಿಯವರು ಹೋರಾಟ ಮಾಡಿದರೋ ಅವರು ಗಾಂಧಿಯನ್ನು ಕೊಲ್ಲಲಿಲ್ಲ. ನಮ್ಮದೇಶದ ಮತಾಂಧರೇ ಮಹಾತ್ಮ ಗಾಂಧೀಜಿಯನ್ನು ಕೊಂದರು. ನಾಥೂರಾಮ್ ಗೂಡ್ಸೆ ಸಮಯ ನೋಡಿ ಗಾಂಧೀಜಿ ಉಪವಾಸ ಸತ್ಯಾಗ್ರಹದಿಂದ ಕೃಶವಾಗಿದ್ದನ್ನು ಕಂಡು ಗುಂಡೇಟು ಹಾರಿಸಿದ. ಮಹಾತ್ಮ ಗಾಂಧೀಜಿ ದೇಶದಲ್ಲಿ ಸಾಮರಸ್ಯ ಕಾಪಾಡಬೇಕು. ಹಿಂದೂ ಮುಸ್ಲಿಂ ಇಸಾಯಿ ಎಲ್ಲಾ ಸೌಹಾರ್ದ್ಯದಿಂದ ಇರಬೇಕೆಂದು ಹೋರಾಡಿದವರು. ಗಾಂಧಿಜಿ ಜೊತೆ ಬಲಿದಾನ ಮಾಡಿದ ಎಲ್ಲರನ್ನೂ ಇಂದು ಸ್ಮರಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಹಿರಿಯ ಕಾಂಗ್ರೆಸಿಗ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಗಾಂಧಿಜಿಯ ಜಾತ್ಯಾತೀತ ತತ್ವ ಮತ್ತು ಸಮಾಜ ಜೊತೆಯಾಗಿ ತೆಗದುಕೊಂಡು ಹೋಗಬೇಕು ದೇಶ ಒಗ್ಗಟ್ಟಾಗಿ ಇರಬೇಕು. ಇಸಾಯಿ ಮುಸ್ಲಿಂ ಬುದ್ದಿಸ್ ಜೈನ್ ಎಲ್ಲರು ಒಟ್ಟಾಗಿ ಹೋಗ ಬೇಕೆಂದು ಕರೆ ನೀಡಿದ್ದರು. ಅಲ್ಲಾಹು ಈಶ್ವರ್ ಎಂದು ಪ್ರಾರ್ಥಿಸುತ್ತಿದ್ದ ಗಾಂಧೀಜಿ,ದೇಶದ ಐಕ್ಯತೆಗೆ ಪ್ರಾಣವನ್ನೇ ತ್ಯಾಗ ಮಾಡಿದರು.ಅಧಿಕಾರದ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲದ ಗಾಂಧೀಜಿ, ಜನಹಿತ ದೇಶದ ಹಿತಕ್ಕಾಗಿ ನೆಹರು ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಮಾಡುವಾಗಲೂ ಬೆಂಗಾಲ್ ನಲ್ಲಿ ಗಲಭೆ ನಿಯಂತ್ರಿಸಲು ಹೋಗಿದ್ದರು.ಗಾಂಧೀಜಿಯಂತವರು ನಮ್ಮ ಕಾಂಗ್ರೆಸ್ ನ ಮುಖಂಡರು, ಪಕ್ಷದ ಅಧ್ಯಕ್ಷರೂ ಆಗಿದ್ದರು ಎಂಬುದೇ ನಮ್ಮ ಹಮ್ಮೆ ಎಂದರು.
ಕೇವಲ ಮತಗಳಿಕೆಗಾಗಿ ಗಾಂಧೀಜಿ ಹೆಸರು ಹೇಳಿ ಕೆಲವರು ದೇಶ ಕಟ್ಟುತ್ತೇನೆ ಎನ್ನುತ್ತಾರೆ. ಗಾಂಧೀಜಿಯನ್ನು ಕೊಲೆ ಮಾಡಿದವರು, ಗಾಂಧಿ ತತ್ವಕ್ಕೆ ವಿರುದ್ಧವಾಗಿ ನಡೆಯವವರು ಗಾಂಧಿ ಮಾತಿನ ಮೇಲೆ ದೇಶ ಕಟ್ಟುತ್ತಾರೆಯೇ?ಎಂದು ಬಿಜೆಪಿ ವಿರುದ್ಧ ಖರ್ಗೆ ಹರಿಹಾಯ್ದರು.
ದೇಶದಲ್ಲಿ ಮೂರು ಕೆಟ್ಟ ಕೃಷಿ ಕಾನೂನು ತಂದಿದ್ದು, ಇದರ ವಿರುದ್ಧ ರೈತರು ದೇಶಾದ್ಯಂತ ಹೋರಾಟ ಮಾಡುತ್ತಿದ್ದಾರೆ.ಕಾಂಗ್ರೆಸ್ ಸರ್ಕಾರದಲ್ಲಿದ್ದಾಗ ರೈತರಿಗೆ ಸಾಲಮನ್ನಾ ಹಾಗೂ ಸಬ್ಸಿಡಿಯನ್ನು ಬಿಜೆಪಿಗಿಂತಲೇ ಹೆಚ್ಚಾಗಿ ನೀಡಿದ್ದೇವೆ. ಬಿಜೆಪಿಯವರದ್ದು ನಾಲ್ಕಾಣೆ ಕೋಳಿ ಹನ್ನೆರಡಾಣೆ ಮಸಾಲೆ ಎಂದು ಕುಟುಕಿದರು.