ನವದೆಹಲಿ, ಜ 30 – ಮೂರು ಕೃಷಿ ಕಾನೂನುಗಳ ಕುರಿತು ಪ್ರತಿಭಟನೆ ನಡೆಸುತ್ತಿರುವ ರೈತರ ಮುಂದಿಡಲಾಗಿರುವ ಸರ್ಕಾರದ ಪ್ರಸ್ತಾವ ಇನ್ನೂ ಮುಕ್ತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷಗಳ ಸಭೆಯಲ್ಲಿ ಹೇಳಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಶನಿವಾರ ತಿಳಿಸಿದ್ದಾರೆ.
ರೈತ ಮಖಂಡರೊಂದಿಗೆ ಕೊನೆಯ ಬಾರಿಗೆ ನಡೆದ ಸಭೆಯಲ್ಲಿ ಸರ್ಕಾರ ವ್ಯಕ್ತಪಡಿಸಿದ್ದ ನಿಲುವು ಬದಲಾಗಿಲ್ಲ ಎಂದು ಮೋದಿ ಸಭೆಯ ಅಂತ್ಯದಲ್ಲಿ ಹೇಳಿದ್ದಾರೆ ಎಂದು ಸಭೆ ನಂತರ ಪ್ರಹ್ಲಾದ್ ಜೋಷಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಿಜೆಪಿ ಸೇರಿದಂತೆ ದೊಡ್ಡ ರಾಜಕೀಯ ಪಕ್ಷಗಳು ಕಲಾಪಗಳು ಅಡ್ಡಿಪಡಿಸದಂತೆ ನಡೆದುಕೊಳ್ಳಬೇಕು. ಇದರಿಂದ ಸಣ್ಣ ಪಕ್ಷಗಳಿಗೆ ಮಾತನಾಡಲು ಅವಕಾಶ ದೊರೆಯುತ್ತದೆ ಎಂದು ಪ್ರಧಾನಿ ಸಭೆಯಲ್ಲಿ ಹೇಳಿದ್ದಾರೆ.
ಕೃಷಿ ಕಾನೂನುಗಳು ಮತ್ತು ಇತರ ಪ್ರಮುಖ ವಿಷಯಗಳ ಕುರಿತಂತೆ ಬಜೆಟ್ ಗೂ ಮುನ್ನ ಚರ್ಚೆಗೆ ಕೈಗೆತ್ತಿಕೊಳ್ಳಬೇಕು ಎಂದು ಸಭೆಯಲ್ಲಿ ಬಹುತೇಕ ಪ್ರತಿಪಕ್ಷಗಳು ಒತ್ತಾಯಿಸಿವೆ. ಸರ್ಕಾರ ಬೇಡಿಕೆಗೆ ಒಪ್ಪಿಕೊಂಡಿದೆ. ರೈತರ ಮುಂದೆ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಇಟ್ಟಿರುವ ಪ್ರಸ್ತಾವ ಆಧರಿಸಿ ಈ ಚರ್ಚೆಗಳು ನಡೆಯಬೇಕಿದೆ ಎಂದು ಸಭೆಯಲ್ಲಿ ಪ್ರಧಾನಿ ಹೇಳಿದ್ದಾರೆ.