ನವದೆಹಲಿ, ಜ 31- ಕೊರೋನಾ ಲಸಿಕೆ ಪಡೆದುಕೊಂಡ ನಂತರ ಈ ವರೆಗೆ 11 ಮಂದಿ ವೈದ್ಯಕೀಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರು ಮೃತಪಟ್ಟಿರುವುದಕ್ಕೆ ಸಾರ್ವಜನಿಕ ಆರೋಗ್ಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ವಿಷಯದಲ್ಲಿ ತನಿಖೆ ನಡೆಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದ್ದು ಪತ್ರ ಬರೆದವರಲ್ಲಿ ಮಾಲಿನಿ ಐಸೋಲಾ, ಎಸ್ಪಿ ಕಲಾಂತ್ರಿ ಹಾಗೂ ಟಿ. ಜಾಕೋಬ್ ಜಾನ್ ಮತ್ತಿತರ ಆರೋಗ್ಯ ತಜ್ಞರು ಸೇರಿದ್ದಾರೆ.
ಈ ಸಾವುಗಳಿಗೂ ಕೊರೋನಾ ಲಸಿಕೆಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯ ಸರ್ಕಾರಗಳ ಅಧಿಕಾರಿಗಳು ಹೇಳುತ್ತಿದ್ದಾರೆ. ಆದಾಗ್ಯೂ, ಪ್ರತಿಕೂಲ ಪರಿಣಾಮಗಳಿಗೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿನ ಸಮಿತಿಗಳು ನಡೆಸಿದ ತನಿಖೆಯ ಅಂದಾಜು ಬಹಿರಂಗಪಡಿಸಲಾಗಿಲ್ಲ. ಈ ಸಾವುಗಳ ಬಗ್ಗೆ ತನಿಖೆ ನಡೆಸಿದವರು ಯಾರು ಮತ್ತು ತನಿಖೆಗೆ ಅವರು ಯಾವ ವಿಧಾನ ಅಳವಡಿಸಿಕೊಂಡಿದ್ದರು ಎಂಬ ವಿವರಗಳು ಸಹ ಲಭ್ಯವಿಲ್ಲ. ವ್ಯಾಕ್ಸಿನೇಷನ್ ನಂತರ ಉಂಟಾಗುವ ಅಡ್ಡ ಪರಿಣಾಮಗಳ ತನಿಖೆ ನಡೆಸುವುದು ರಾಷ್ಟ್ರೀಯ ಸಮಿತಿಯ ಹೊಣೆಯಾಗಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಲಸಿಕೆಯ ಗಂಭೀರ ಅಡ್ಡ ಪರಿಣಾಮಗಳಿಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ವ್ಯಾಖ್ಯಾನದಂತೆಯೇ ಈ ಸಾವುಗಳು ಸಂಭವಿಸಿವೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಈ ವಿಷಯ ಕುರಿತು ತನಿಖೆ ನಡೆಸಿ ಸಾರ್ವಜನಿಕರಲ್ಲಿ ಲಸಿಕೆ ಕುರಿತು ವಿಶ್ವಾಸ ಮೂಡಿಸಬೇಕು ಎಂದು ಅವರು ಸರ್ಕಾರವನ್ನು ಕೋರಿದ್ದಾರೆ.