ನವದೆಹಲಿ, ಫೆ.1 – ಪ್ರಧಾನಮಂತ್ರಿ ಆತ್ಮನಿರ್ಬರ ಸ್ವಾಸ್ಥ್ಯ ಭಾರತ ಯೋಜನೆ, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಬಲವರ್ಧನೆ, 7 ಜವಳಿ ಪಾರ್ಕ್ ಗಳ ಸ್ಥಾಪನೆ, ಉಜ್ವಲ ಯೋಜನೆಯಡಿ ಒಂದು ಕೋಟಿ ಅಡುಗೆ ಅನಿಲ ವಿತರಣೆ, 100 ಸೈನಿಕ ಶಾಲೆಗಳ ನಿರ್ಮಾಣ, ಹಿರಿಯ ನಾಗರಿಕರಿಗೆ ತೆರಿಗೆ ರಿಟರ್ಸ್ ವಿನಾಯಿತಿ ಸೇರಿದಂತೆ ಹಲವು ಹೊಸ ಯೋಜನೆಗಳ ಘೋಷಣೆ ಮೂಲಕ ಕೊರೊನಾದಿಂದ ಪಾತಾಳಕ್ಕಿದಿರುವ ಆರ್ಥಿಕತೆಗೆ ಉತ್ತೇಜನ ನೀಡುವ ಪ್ರಯತ್ನವನ್ನು ಕೇಂದ್ರ ಹಣಕಾಸು ನಿರ್ಮಲಾ ಸೀತಾರಾಮನ್ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಮಾಡಿದ್ದು, ಆರೋಗ್ಯ, ಕೃಷಿ, ಕೈಗಾರಿಕೆ, ಉತ್ಪಾದನಾ ವಲಯಕ್ಕೆ ಒತ್ತು ನೀಡಿ ಸಮತೋಲನದ ಬಜೆಟ್ ಮಂಡಿಸಿದರು.
ಲೋಕಸಭೆಯಲ್ಲಿಂದು ಬಜೆಟ್ ಭಾಷಣ ಮಾಡಿದ ಅವರು, 75 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆದಾರ ತೆರಿಗೆ ರಿಟರ್ಸ್ ಸಲ್ಲಿಸಬೇಕಾಗಿಲ್ಲ. ಅವರು ಪಿಂಚಣಿಗೆ ತೆರಿಗೆ ಪಾವತಿಸುವ ಅಗತ್ಯವಿಲ್ಲ ಎಂದು ತಮ್ಮ ಭಾಷಣದಲ್ಲಿ ತಿಳಿಸಿರುವ ಸಚಿವೆ, ನೇರ ತೆರಿಗೆ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ತರಲಾಗುತ್ತಿದೆ ಎಂದು ತಿಳಿಸಿದರು.
‘ಪ್ರಧಾನ ಮಂತ್ರಿ ಆತ್ಮನಿರ್ಭರ ಸ್ವಾಸ್ಥ ಭಾರತ ಯೋಜನೆ’ ಆರಂಭಿಸಲಾಗುತ್ತಿದ್ದು, ಈ ಯೋಜನೆಗಳಿಗಾಗಿ ಮುಂದಿನ 6 ವರ್ಷಗಳಿಗೆ 64,180 ಕೋಟಿ ರೂ.ವಿನಿಯೋಗಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.
ಭಾರತದಲ್ಲಿ ಪ್ರಸ್ತುತ ಎರಡು ಕೋವಿಡ್–19 ಲಸಿಕೆಗಳಿವೆ, ದೇಶದಿಂದ ಇನ್ನೂ ಎರಡು ಲಸಿಕೆಗಳನ್ನು ನಿರೀಕ್ಷಿಸಲಾಗುತ್ತಿದೆ. ಭಾರತದಲ್ಲಿ ಪ್ರಸ್ತುತ ಕೋವಿಡ್ನಿಂದ ಸಾವಿಗೀಡಾಗುತ್ತಿರುವ ಪ್ರಮಾಣ ಅತ್ಯಂತ ಕಡಿಮೆ ಮಟ್ಟ ತಲುಪಿದ್ದು, ಪ್ರತಿ 10 ಲಕ್ಷ ಜನರಿಗೆ 112 ಜನರು ಸಾವಿಗೀಡಾಗಿದ್ದರೆ, 130 ಪ್ರಕರಣಗಳು ಸಕ್ರಿಯವಾಗಿವೆ ಎಂದು ತಿಳಿಸಿದರು.
ದೇಶಾದ್ಯಂತ ಒಟ್ಟು 7 ಜವಳಿ ಪಾರ್ಕ್ ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಸ್ಥಾಪಿಸಲಾಗುವುದು. ಉತ್ಪಾದನಾ ಕ್ಷೇತ್ರಕ್ಕೆ 1.94 ಕೋಟಿ ರೂಪಾಯಿ ಅನುದಾನ ನೀಡುತ್ತಿದ್ದು ಜವಳಿ ಪಾರ್ಕ್ ಗಳು ಜಾಗತಿಕ ಮಟ್ಟದಲ್ಲಿ ಮಹತ್ವ ಪಡೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
ಜವಳಿ ಉದ್ಯಮದಲ್ಲಿ ಚೀನಾ ಹಾಗೂ ವಿಯೆಟ್ನಾಮ್ ಗಳು ಮುಂಚೂಣಿಯಲ್ಲಿದ್ದು, ಚೀನಾ ವಿಯೆಟ್ನಾಮ್ ಮಾದರಿಯಲ್ಲೇ 7 ಮೆಗಾ ಜವಳಿ ಪಾರ್ಕ್ ಗಳನ್ನು ಸ್ಥಾಪಿಸಲು ಜವಳಿ ಸಚಿವಾಲಯ ಪ್ರಸ್ತಾವನೆ ಸಲ್ಲಿಸಿತ್ತು. ಇದನ್ನು ಸಚಿವರು ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ.
ಉಜ್ವಲ ಯೋಜನೆಯಡಿ ಈ ವರೆಗೂ 8 ಕೋಟಿ ಕುಟುಂಬಗಳಿಗೆ ಅಡುಗೆ ಅನಿಲ ಪೂರೈಕೆ ಯೋಜನೆ ತಲುಪಿದ್ದು, ಮುಂದಿನ ದಿನಗಳಲ್ಲಿ ಇನ್ನೂ 1 ಕೋಟಿ ಕುಟುಂಬಗಳಿಗೆ ಯೋಜನೆ ತಲುಪಿಸುವ ಗುರಿ ಹೊಂದಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.
ಉಜ್ವಲ ಯೋಜನೆ ದೇಶದ ಇನ್ನೂ 100 ನಗರಗಳಿಗೆ ಮುಂದಿನ 3 ವರ್ಷದಲ್ಲಿ ವಿಸ್ತರಣೆಯಾಗಲಿದೆ. ಇಲ್ಲಿ 1 ಕೋಟಿ ಕುಟುಂಬಗಳಿಗೆ ಗ್ಯಾಸ್ ಯೋಜನೆ ನೀಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ 1 ಸಾವಿರ ಹೊಸ ಗ್ಯಾಸ್ ಏಜೆನ್ಸಿಗಳಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು. ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲೂ ಗ್ಯಾಸ್ ಪೈಪ್ಲೈನ್ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ವಾಹನ ಉದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಲು ಹಳೆಯ ವಾಹನಗಳನ್ನು ಸ್ಕ್ರಾಪ್ ಮಾಡುವ ಹೊಸ ನೀತಿಯನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
20 ವರ್ಷದಷ್ಟು ಹಳೆದ ಖಾಸಗಿ ವಾಹನಗಳು ಮತ್ತು 15 ವರ್ಷ ಹಳೆಯ ವಾಣಿಜ್ಯ ವಾಹನಗಳನ್ನು ಗುಜರಿಗೆಗೆ ಹಾಕುವ ಸಂಬಂಧ ಹೊಸ ಸ್ಕ್ರಾಪೇಜ್ ನೀತಿಯನ್ನು ಪ್ರಕಟಿಸಿದ್ದಾರೆ.
ಈ ವಾಹನ ಸ್ಕ್ರಾಪಿಂಗ್ ನೀತಿಯು ಸ್ವಯಂ ಪ್ರೇರಣೆಯದ್ದಾಗಿರಲಿದ್ದು, 20 ವರ್ಷದ ಖಾಸಗಿ ಮತ್ತು 15 ವರ್ಷದ ವಾಣಿಜ್ಯ ವಾಹನಗಳನ್ನು ಸಾಮರ್ಥ್ಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಒಂದು ದೇಶ ಒಂದು ಪಡಿತರ ಚೀಟಿ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದ್ದು, ಈ ಯೋಜನೆ ಮೂಲಕ ಫಲಾನುಭವಿಗಳು ತಮ್ಮ ಪಡಿತರವನ್ನು ದೇಶದ ಯಾವುದೇ ಮೂಲೆಯಲ್ಲಾದರೂ ಪಡೆಯಬಹುದು. ವಲಸೆ ಕಾರ್ಮಿಕರಿಗೆ ಈ ಯೋಜನೆಯಿಂದ ಹೆಚ್ಚಿನ ಅನುಕೂಲದೊರೆಯಲಿದೆ. ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್ ಯೋಜನೆಯನ್ನು 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಜಾರಿಗೊಳಿಸುತ್ತಿವೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.