ನವದೆಹಲಿ, ಫೆಬ್ರವರಿ 1- ಕೋವಿಡ್-19 ಸಾಂಕ್ರಾಮಿಕದಿಂದ ಕುಸಿದಿರುವ ಆರ್ಥಿಕತೆಯನ್ನು “ವಿ-ಆಕಾರದ”ದಲ್ಲಿ ಮೇಲೆತ್ತಲು ಮತ್ತು ಆರ್ಥಿಕ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡಲು, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೋಮವಾರ 2021-22ರ ಆರ್ಥಿಕ ವರ್ಷದ ಬಜೆಟ್ನಲ್ಲಿ ನರೇಂದ್ರ ಮೋದಿ ಸರ್ಕಾರದ ಆತ್ಮನಿರ್ಭರ್ ಭಾರತ್ ಅಭಿಯಾನಕ್ಕೆ ಅನುಗುಣವಾಗಿ ಹಲವಾರು ಯೋಜನೆಗಳನ್ನು ಪ್ರಕಟಿಸಿದ್ದಾರೆ.
ನಿರೀಕ್ಷೆಯಂತೆ, ಆತ್ಮನಿರ್ಭರ ನೀತಿಯ ಆರು ಸ್ತಂಭಗಳನ್ನು ಬಲಪಡಿಸಲು ಹಣಕಾಸು ಸಚಿವರು ಅನಾವರಣಗೊಳಿಸಿದ ಬಜೆಟ್ ಪ್ರಸ್ತಾಪಗಳಲ್ಲಿ ಆರೋಗ್ಯ ಮತ್ತು ಮೂಲಸೌಕರ್ಯ ಕೇಂದ್ರ ಸ್ಥಾನಗಳಲ್ಲಿದ್ದು, ಉಳಿದಂತೆ ಸಮಗ್ರ ಅಭಿವೃದ್ಧಿ, ಮಾನವ ಬಂಡವಾಳ, ನಾವೀನ್ಯತೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಆರ್ಥಿಕ ಪ್ರಗತಿಯನ್ನು ಸುಗಮವಾಗಿ ಮುಂದಕ್ಕೆ ಕೊಂಡೊಯ್ಯಲು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ ಎಂದು ಹೇಳಿದ ವಿತ್ತ ಸಚಿವರು, ಆರು ವರ್ಷಗಳ ಕಾಲ ಜಾರಿಯಲ್ಲಿರುವ 64,180 ಕೋಟಿ ರೂ.ಗಳ ವೆಚ್ಚದ ಆತ್ಮನಿರ್ಭರ್ ಸ್ವಾಸ್ಥ್ಯ ಭಾರತ ಯೋಜನೆಯನ್ನು ಘೋಷಿಸಿದರು.
ಆರೋಗ್ಯ ಮತ್ತು ಯೋಗಕ್ಷೇಮ ವಲಯಕ್ಕೆ ಬಜೆಟ್ ಅನುದಾನದಲ್ಲಿ ಶೇಕಡಾ 138 ರಷ್ಟು ಏರಿಸಿ, 2,23,846 ಕೋಟಿ ರೂ.ನೀಡಲಾಗಿದೆ.
ಕೋವಿಡ್ -19 ಲಸಿಕೆಗಳಿಗೆ ಸರ್ಕಾರ 35,400 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಅನುದಾನ ನೀಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ಘೋಷಿಸಿದ ಸಚಿವರು, ವಿವಿಧ ರಾಜ್ಯಗಳಲ್ಲಿ ಹೆದ್ದಾರಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಪ್ರಸ್ತಾಪ ಪ್ರಕಟಿಸಿದ್ದು, ರೈಲ್ವೆ ಇಲಾಖೆಯು 2030 ರವರೆಗೆ ರಾಷ್ಟ್ರೀಯ ರೈಲು ಯೋಜನೆಯನ್ನು ಜಾರಿಗೆ ತರಲಿದೆ ಎಂದು ತಿಳಿಸಿದರು.
ವಾಯುಯಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಎರಡನೇ ಹಂತ- ಮತ್ತು ಮೂರನೆ ಹಂತಗಳ ನಗರಗಳು ಮತ್ತು ಪಟ್ಟಣಗಳ ಮುಂದಿನ ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಹೇಳಿದರು.
ರಾಷ್ಟ್ರೀಯ ಮೂಲಸೌಕರ್ಯ ಪೈಪ್ಲೈನ್ ಅಡಿಯಲ್ಲಿ ನಿಗದಿಪಡಿಸಿದ ಗುರಿಗಳನ್ನು ಸಾಧಿಸಲು ಸರ್ಕಾರ ಬದ್ಧವಾಗಿದೆ ಎಂದು ಹಣಕಾಸು ಸಚಿವರು ತಿಳಿಸಿದರು.
ಬಜೆಟ್ ನಲ್ಲಿ ನಗರ ಪ್ರದೇಶಕ್ಕೂ ಹೆಚ್ಚಿನ ಗಮನ ನೀಡಲಾಗಿದೆ. ಜಲ್ ಜೀವನ್ ಮಿಷನ್ ಅರ್ಬನ್ ಯೋಜನೆಯನ್ನು 5 ವರ್ಷಗಳಲ್ಲಿ 2.87 ಲಕ್ಷ ಕೋಟಿ ರೂ.ಗಳೊಂದಿಗೆ ಪ್ರಾರಂಭಿಸಲಾಗುವುದು. ಎಲ್ಲಾ 4,378 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವತ್ರಿಕ ನೀರು ಸರಬರಾಜು ಮಾಡುವ ಉದ್ದೇಶವನ್ನು ಹೊಂದಲಾಗಿದೆ. 500 ಅಮೃತ ನಗರಗಳಲ್ಲಿ 2.86 ಕೋಟಿ ಮನೆಗಳಿಗೆ ನಳ್ಳಿ ಸಂಪರ್ಕ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಯೋಜನೆಯನ್ನು ಹಣಕಾಸು ಸಚಿವರು ಘೋಷಿಸಿದರು.
ನಗರ ಸ್ವಚ್ಛ ಭಾರತ್ ಮಿಷನ್ 2.0 ಅನ್ನು 2021 ರಿಂದ 5 ವರ್ಷಗಳಲ್ಲಿ 1,41,678 ಕೋಟಿ ರೂ.ಗಳ ವೆಚ್ಚದಲ್ಲಿ ಘೋಷಿಸಿದ್ದು, ತ್ಯಾಜ್ಯ ನೀರು ಸಂಸ್ಕರಣೆ, ಮೂಲದಲ್ಲೇ ತ್ಯಾಜ್ಯ ವಿಂಗಡನೆ, ನಗರ ನಿರ್ಮಾಣ ತ್ಯಾಜ್ಯ ನಿರ್ವಹಣೆಗೆ ಇದರಲ್ಲಿ ಒತ್ತು ನೀಡಲಾಗಿದೆ.
ನಗರ ಅನಿಲ ವಿತರಣಾ ಜಾಲವನ್ನು ಇನ್ನೂ 100 ನಗರಗಳಿಗೆ ವಿಸ್ತರಿಸಲಾಗುವುದು ಎಂದು ನಿರ್ಮಲಾ ಸೀತರಾಮನ್ ತಿಳಿಸಿದರು.