ಬೆಂಗಳೂರು, ಫೆ.1 – ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ 2021-22 ರ ಕೇಂದ್ರ ಬಜೆಟ್ ಬಸವಳಿದಿರುವ ಭಾರತೀಯ ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ಸಂಜೀವಿನಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ 19 ಸಾಂಕ್ರಾಮಿಕದ ಪರಿಣಾಮವಾಗಿ ಸ್ಥಗಿತಗೊಂಡ ಅರ್ಥವ್ಯವಸ್ಥೆ ಮತ್ತೆ ಪುಟಿದೇಳಲು ಈ ಬಜೆಟ್ ವೇಗವರ್ಧಕವಾಗಿ ಕೆಲಸ ಮಾಡಲಿದೆ. ಸಾಂಕ್ರಾಮಿಕದ ಸಂಕಷ್ಟದ ನಡುವೆ ಇದಕ್ಕಿಂತ ಉತ್ತಮ ಬಜೆಟ್ ನಿರೀಕ್ಷಿಸುವುದು ಅಸಾಧ್ಯ. ರೋಗನಿಯಂತ್ರಣದ ಜೊತೆಗೆ ಅರ್ಥ ವ್ಯವಸ್ಥೆಯ ಪುನರುಜ್ಜೀವನಕ್ಕೆ ಅಗತ್ಯವಾದ ಕಾರ್ಯತಂತ್ರವನ್ನು ಕೇಂದ್ರ ವಿತ್ತ ಸಚಿವೆಯವರು ಬಜೆಟ್ನ ಲ್ಲಿ ಪ್ರಕಟಿಸಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಸಾಂಕ್ರಾಮಿಕದ ನಿವಾರಣೆಗೆ ಕೈಗೊಂಡಿರುವ ಲಸಿಕೆ ಅಭಿಯಾನಕ್ಕೆ 35,000 ಕೋಟಿ ರೂ. ಒದಗಿಸಿದ್ದು , ಇನ್ನೂ ಹೆಚ್ಚಿನ ಹಣದ ಅಗತ್ಯ ಬಿದ್ದಲ್ಲಿ ಒದಗಿಸುವುದಾಗಿ ಕೇಂದ್ರ ಸಚಿವೆಯವರು ತಿಳಿಸಿರುವುದು ಸ್ವಾಗತಾರ್ಹ. ಕೃಷಿ ಕ್ಷೇತ್ರದ ಬಲವರ್ಧನೆ, ಅನ್ನದಾತ ರೈತರ ಅಭಿವೃದ್ಧಿಗೆ ಪ್ರಾಮುಖ್ಯತೆ, ಕೌಶಲ್ಯ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಮತ್ತು ಕೈಗಾರಿಕಾ ಬೆಳವಣಿಗೆಗೆ ಈ ಬಜೆಟ್ನಖಲ್ಲಿ ವಿಶೇಷ ಗಮನ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಜೀಯವರ ಕನಸಿನಂತೆ 2022 ರೊಳಗೆ ರೈತರ ಆದಾಯ ದ್ವಿಗುಣಗೊಳಿಸಲು ಈ ಬಜೆಟ್ ಭೂಮಿಕೆ ಒದಗಿಸಿದೆ ಎಂದರು.