ಬೆಂಗಳೂರು, ಫೆ.1 – ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿರುವ ಬಜೆಟ್ ಬರ್ಬಾದ್ (ನಾಶ, ದಿವಾಳಿ) ಆಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಬಜೆಟ್ ಕುರಿತು ತಮ್ಮ ಪ್ರತಿಕ್ರಿಯೆ ನೀಡಿದ ಅವರು, ಬಜೆಟ್ ಕುರಿತು ತಮಗೆ ಯಾವುದೇ ನಿರೀಕ್ಷೆ ಇಲ್ಲ ಎಂದು ಹೇಳಿದ್ದೆ. ಅದು ನಿಜವಾಗಿದೆ ಎಂದರು.
ಆತ್ಮ ನಿರ್ಭರ ಯೋಜನೆಯಲ್ಲಿ ಹಣಕಾಸು ಸಚಿವರು ಮೂರು ಪ್ಯಾಕೇಜ್ ಘೋಷಣೆ ಮಾಡಿದ್ದರು. ಈ ಬಜೆಟ್ ಅದರ ಮುಂದುವರಿದ ಭಾಗವಾಗಿದೆ. ನಿರ್ಮಲಾ ಸೀತಾರಾಮನ್ ಅವರು ಇದೀಗ ಆತ್ಮ ಬರ್ಬರ ಬಜೆಟ್ ಕೊಟ್ಟಿದ್ದಾರೆ. ಅದು ಆತ್ಮ ಬರ್ಬಾದ್ ಬಜೆಟ್ ಆಗಿದೆ ಎಂದು ಹೇಳಿದರು.
ಸಾಮಾನ್ಯ ಜನರು ಬಜೆಟ್ ಕುರಿತು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಉತ್ತಮವಾದ ಬಜೆಟ್ ನಿರೀಕ್ಷೆ ಮಾಡಿದ್ದರು. ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿರುವುದರಿಂದ ಕೇಂದ್ರ ಸರ್ಕಾರದಿಂದ ಚೇತರಿಕೆಯ ಹಾದಿ ನಿರೀಕ್ಷೆ ಮಾಡಲಾಗಿತ್ತು. ಆದರೆ, ಅದು ಹುಸಿಯಾಗಿದೆ. ಲಾಕ್ ಡೌನ್ ಪರಿಣಾಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚಿ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದರು. ಕೈಗಾರಿಕೆಗಳ ಪುನಶ್ಚೇತನದ ನಿರೀಕ್ಷೆಯೂ ಹುಸಿಯಾಗಿದೆ. ಆರ್ಥಿಕ ತಜ್ಞರು ನೀಡಿದ್ದ ಸಲಹೆಗಳನ್ನೂ ಕೇಂದ್ರ ಸರ್ಕಾರ ಗಾಳಿಗೆ ತೂರಿದೆ ಎಂದರು.
ಹೊಸದಾಗಿ ಕೃಷಿ ಸೆಸ್ ಘೋಷಣೆ ಮಾಡಲಾಗಿದೆ. ಎರಡೂವರೆ ಪರ್ಸೆಂಟ್ನಿಂಾದ ನೂರು ಪರ್ಸೆಂಟ್ ವರೆಗೆ ಸೆಸ್ ವಿಧಿಸಲಾಗಿದೆ. ಒಂದೆಡೆ ದೇಶಕ್ಕೆ ಬರುವ ಕೃಷಿ ಉತ್ಪನ್ನಗಳ ಮೇಲಿನ ಆಮದು ಸುಂಕ ಕಡಿಮೆ ಮಾಡಿ ಮತ್ತೊಂದೆಡೆ ಕೃಷಿ ಸೆಸ್ ವಿಧಿಸಲಾಗಿದೆ. ಕೃಷಿ ಉತ್ತೇಜನಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಜೆಟ್ನಿಲ್ಲಿ ತಿಳಿಸಲಾಗಿದೆ. ಗೊಬ್ಬರ, ಸೇಬು, ಯಂತ್ರೋಪಕರಣಗಳು, ಕೃಷಿ ಉತ್ಪನ್ನಗಳ ಮೇಲೆ ಸೆಸ್ ವಿಧಿಸಿ ಆಮದು ಸುಂಕ ಕಡಿಮೆ ಮಾಡಿರುವುದು ಯಾವ ಆರ್ಥಿಕತೆ ಎಂಬುದು ಅರ್ಥವಾಗಿಲ್ಲ. ಅದರ ಬದಲಿಗೆ ರೈತರಿಗೆ ಸಾಲ ವಿತರಿಸುವ ಕಾರ್ಯಕ್ರಮ ಘೋಷಣೆ ಮಾಡಬಹುದಾಗಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
ಬಡ್ಡಿ ರಹಿತವಾಗಿ ರೈತರಿಗೆ ಸಾಲ ನೀಡುವ, ಸಾಲ, ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ನಿರೀಕ್ಷೆ ರೈತರಿಗೆ ಇತ್ತು. ಅದು ಅವರ ಬಹು ದಿನಗಳ ಬೇಡಿಕೆಯಾಗಿತ್ತು. ಒಂದು ರೂಪಾಯಿ ಸಾಲ ಮನ್ನಾ ಮಾಡಿಲ್ಲ. ವಸೂಲಿ ಮಾಡುವ ಕೃಷಿ ಸೆಸ್ ನ್ನು ರೈತರ ಕಲ್ಯಾಣಕ್ಕೆ ಖರ್ಚು ಮಾಡಲು ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಿಲ್ಲ. ಕೃಷಿ ಪದಾರ್ಥಗಳ ಬೆಲೆ ಕುಸಿದಾಗ ಮಾರುಕಟ್ಟೆ ಮಧ್ಯೆ ಪ್ರವೇಶ ಮಾಡಿ ಬೆಂಬಲ ಬೆಲೆ ನೀಡುವ ಪ್ರಯತ್ನ ಆಗಿಲ್ಲ ಎಂದು ಟೀಕಿಸಿದರು.