ಮುಂಬೈ, 2- ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಹಳ್ಳಿಯಲ್ಲಿ 12 ಮಕ್ಕಳಿಗೆ ನೀಡಿದ ಪೋಲಿಯೊ ಲಸಿಕೆಯಲ್ಲಿ ಭಾರಿ ನಿರ್ಲಕ್ಷ್ಯ ಸಂಭವಿಸಿದೆ. ಮಕ್ಕಳಿಗೆ ಪೋಲಿಯೊ ಲಸಿಕೆ ನೀಡುವ ಬದಲು ಸ್ಯಾನಿಟೈಸರ್ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಯಾನಿಟೈಸರ್ ನೀಡಲಾಗಿರುವ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಕ್ಕಳ ಪರಿಸ್ಥಿತಿ ಸ್ಥಿರವಾಗಿದೆ ಹಾಗೂ ಪ್ರಕರಣದಲ್ಲಿ ಮೂರು ಆರೋಗ್ಯ ಕಾರ್ಯಕರ್ತರ ವಿರುದ್ದ ಕ್ರಮ ಜರುಗಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾನುವಾರ 1-5 ವರ್ಷದೊಳಗಿನ ಮಕ್ಕಳಿಗೆ ರಾಷ್ಟ್ರೀಯ ಪಲ್ಸ್ ಪೋಲಿಯೊ ವ್ಯಾಕ್ಸಿನೇಷನ್ ಅಭಿಯಾನದ ಈ ಸಂದರ್ಭದಲ್ಲಿ ಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
5 ವರ್ಷಕ್ಕಿಂತ ಕಡಿಮೆ ವಯಸ್ಸಿನ 12 ಮಕ್ಕಳಿಗೆ ಪೋಲಿಯೊ ಹನಿಗಳಿಗೆ ಬದಲಾಗಿ ಸ್ಯಾನಿಟೈಸರ್ ನೀಡಲಾಗಿದೆ ಎಂದು ಯವತ್ಮಾಲ್ ಜಿಲ್ಲಾ ಪರಿಷತ್ ಸಿಇಒ ಶ್ರೀಕೃಷ್ಣ ಪಂಚಲ್ ತಿಳಿಸಿದ್ದಾರೆ.
ಲಸಿಕೆ ಪಡೆದ ನಂತರ ಒಂದು ಮಗು ವಾಂತಿ ಮಾಡಿದ್ದರಿಂದ ಘಟನೆಯ ಬಗ್ಗೆ ಅರಿವಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ. ಸ್ಯಾನಿಟೈಸರ್ ಹನಿಗಳನ್ನು ನೀಡಿದ ಎಲ್ಲ ಮಕ್ಕಳಿಗೆ ಪೋಲಿಯೊ ಹನಿಗಳನ್ನು ನೀಡಿ ಯವತ್ಮಾಲ್ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿದೆ ಎಂದು ಶ್ರೀಕೃಷ್ಣ ಪಂಚಲ್ ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಡಾಕ್ಟರ್, ಅಂಗನವಾಡಿ ಕಾರ್ಯಕರ್ತೆ ಮತ್ತು ಆಶಾ ಸ್ವಯಂಸೇವಕಿ ಸೇರಿದಂತೆ ಮೂವರು ಆರೋಗ್ಯ ಕಾರ್ಯಕರ್ತರು ಘಟನೆ ನಡೆದ ಸಮಯದಲ್ಲಿ ಸ್ಥಳದಲ್ಲಿ ಹಾಜರಿದ್ದರು. “ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಮೂವರು ಆರೋಗ್ಯ ಕಾರ್ಯಕರ್ತರನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಲಾಗುವುದು” ಎಂದು ಪಂಚಲ್ ಹೇಳಿದ್ದಾರೆ.