ಬೆಂಗಳೂರು, ಫೆ.2 – ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಅಧಿಕಾರಿಗಳ ವಿರುದ್ಧ ಬೃಹತ್ ಕಾರ್ಯಾಚರಣೆ ಕೈಗೊಂಡಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ಏಕಕಾಲದಲ್ಲಿ ಬೆಂಗಳೂರು ಸೇರಿ ರಾಜ್ಯದ 30 ಕಡೆಗಳಲ್ಲಿ ದಾಳಿ ನಡೆಸಿ ಏಳು ಮಂದಿ ಸರ್ಕಾರಿ ಅಧಿಕಾರಿಗಳನ್ನು ಬಲೆಗೆ ಕೆಡವಿದ್ದಾರೆ.
ಬೆಂಗಳೂರು ನಗರ, ಬಳ್ಳಾರಿ, ಕೋಲಾರ, ಧಾರವಾಡ, ದಕ್ಷಿಣ ಕನ್ನಡ, ಚಿತ್ರದುರ್ಗ ಹಾಗೂ ಬೀದರ್ನಲ್ಲಿ ಬಲೆಗೆ ಬಿದ್ದ ಅಧಿಕಾರಿಗಳ ಕಚೇರಿ ನಿವಾಸ ಇನ್ನಿತರ ಸ್ಥಳಗಳು ಸೇರಿ 30 ಕಡೆಗಳಲ್ಲಿ ದಾಳಿ ನಡೆಸಿ ಶೋಧ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸೀಮಾಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಸಹಕಾರ ಸಂಘಗಳ ಜಂಟಿ ನಿಂಬಂಧಕ ಪಾಂಡುರಂಗ ಗರಗ, ಶಿಗ್ಗಾವಿಯ ಸಣ್ಣ ನೀರಾವರಿ ಇಲಾಖೆಯ ಎಇಇ ದೇವರಾಜ ಕಲ್ಲೇಶ, ಮಂಗಳೂರು ಪಾಲಿಕೆ ನಗರ ಯೋಜನೆ ಜಂಟಿ ನಿರ್ದೇಶಕ ಕೆ.ವಿ.ಜಯರಾಜ, ಕೊಪ್ಪಳದ ಕಿಮ್ಸ್ ಆಸ್ಪತ್ರೆಯ ಹೆಚ್ಒಡಿ ಡಾ.ಶ್ರೀನಿವಾಸ, ಪಿಡಬ್ಲ್ಯೂಡಿ ಇಲಾಖೆ ಮಾಗಡಿ ಉಪವಿಭಾಗದ ಜೆ.ಇ. ಚನ್ನಬಸಪ್ಪ ಅವತಿ, ಕೋಲಾರದ ಡಿಹೆಚ್ಒ ಡಾ.ವಿಜಯ್ಕುಮಾರ, ಧಾರವಾಡ ಎಸಿಎಫ್ ಶ್ರೀನಿವಾಸ ಸೇರಿ 7 ಮಂದಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿ ಶೋಧ ನಡೆಸಲಾಗಿದೆ.
ಪಾಂಡುರಂಗ ಗರಗ ಅವರಿಗೆ ಸೇರಿದ ವಿಜಯನಗರದ ಮನೆ, ಮಲ್ಲೇಶ್ವರಂ ಕಚೇರಿ, ಚಿತ್ರದುರ್ಗದ ಮನೆ ಸೇರಿ ಐದು ಕಡೆ ದಾಳಿಯಾಗಿದೆ.
ಹುಬ್ಬಳ್ಳಿಯ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ ದೇವರಾಜ ಕಲ್ಲೇಶಗೆ ಸೇರಿದ ರಾಜೀವ ಗಾಂಧಿ ನಗರದಲ್ಲಿರುವ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ.
ಕೋಲಾರದ ಡಿಹೆಚ್ಒ ಡಾ.ವಿಜಯ ಕುಮಾರಗೆ ಸೇರಿದ ಮುಳಬಾಗಿಲು ಮನೆ, ಖಾಸಗಿ ಆಸ್ಪತ್ರೆ ಮೇಲೆ ಹಾಗೂ ಬೆಂಗಳೂರಿನಲ್ಲಿನ ಅವರ ಫ್ಲಾಟನಲ್ಲಿ ಪರಿಶೀಲನೆ ಮಾಡಲಾಗುತ್ತಿದೆ ಇವರೆಲ್ಲರೂ ಆದಾಯ ಮೀರಿ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಗಳಿಸಿರುವ ದೂರುಗಳನ್ನು ಪರಿಶೀಲನೆ ನಡೆಸಿ ಪ್ರಾಥಮಿಕ ಮಾಹಿತಿಯನ್ನು ಪಡೆದು ದಾಳಿ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ದಾಳಿಯಲ್ಲಿ ಬಲೆಗೆ ಬಿದ್ದಿರುವ ಅಧಿಕಾರಿಗಳು ಆದಾಯ ಮೀರಿ ಕೋಟ್ಯಾಂತರ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಗಳಿಸಿರುವುದು ಪತ್ತೆಯಾಗಿದೆ. ಅಧಿಕಾರಿಗಳ ಬಳಿಯಿಂದ ವಶಪಡಿಸಿಕೊಂಡ ಬೆಳ್ಳಿ ಚಿನ್ನಾಭರಣಗಳು ಕಾರುಗಳು ಐಷಾರಾಮಿ ವಸ್ತುಗಳು ಆಸ್ತಿ ಪಾಸ್ತಿಯ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದರು.