ಹುಕ್ಕೇರಿ, 3- ಕಳೆದ ತಿಂಗಳು ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಹುಕ್ಕೇರಿ ತಾಲೂಕಿನ ಸುಲ್ತಾನಪೂರ ಗ್ರಾಮದಲ್ಲಿ ನಡೆದ ಅಹಿತಕರ ಘಟನೆಯಲ್ಲಿ ವ್ಯಕ್ತಿಯೊಬ್ಬರ ಹತ್ಯೆಯಾಗಿತ್ತು, ಅಂತಹ ಘಟನೆ ಮರುಕಳಿಸದಿರಲೆಂದು ಈ ಬಾರಿ ಸುಲ್ತಾನಪುರ ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಕಳೆದ ತಿಂಗಳು ಸುಲ್ತಾನಪೂರ ಗ್ರಾಮ ಪಂಚಾಯತ ಚುನಾವಣೆಯ ಫಲಿತಾಂಶ ಬಂದ ಮೇಲೆ ಒಂದು ಕೋಮಿಗೆ ಸೇರಿದ ಜನರು ಮನೆ ಮುಂದೆ ಪಟಾಕಿ ಸಿಡಿಸಿದ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ಅವರು ಅಸು ನೀಗಿದ್ದರು.
ಗ್ರಾಮದ ಹಿರಿಯರು ಇಂದು ನಡೆದ ಅಧ್ಯಕ್ಷ, ಉಪಾದ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸದೇ ಅವಿರೋಧ ಆಯ್ಕೆಗೆ ಶ್ರಮಿಸಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು, ಶ್ರೀಮತಿ ಶೀಲಾ ಪಾಟೀಲ ನಾಮಪತ್ರ ಸಲ್ಲಿಸಿದ್ದರು, ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ಅನ್ವಯ ಶ್ರೀಮತಿ ಸಹದೇವಿ ತಳವಾರ ನಾಮಪತ್ರ ಸಲ್ಲಿಸಿದರು.
ಎರಡೂ ಸ್ಥಾನಕ್ಕೆ ಒಬ್ಬೊಬ್ಬರೆ ನಾಮ ಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ಉಮೇಶ ಸಿದ್ನಾಳ ಅವಿರೋಧ ಆಯ್ಕೆ ಘೋಷಣೆ ಮಾಡಿದರು. ನಂತರ ನೂತನ ಸದಸ್ಯರಿಗೆ ಗ್ರಾಮದ ಮುಖಂಡರು ಸತ್ಕರಿಸಿ ಅಭಿನಂದಿಸಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಅಧ್ಯಕ್ಷೆ ಶೀಲಾ ಪಾಟೀಲ ಮತ್ತು ಉಪಾಧ್ಯಕ್ಷೆ ಸಹದೇವಿ ತಳವಾರ ಗ್ರಾಮದ ಅಭಿವೃದ್ಧಿಗೆ ಎಲ್ಲ ಸದಸ್ಯರ ಸಹಕಾರ ಮತ್ತು ಗ್ರಾಮಗಳ ಮುಖಂಡರ ಮಾರ್ಗದರ್ಶನದಲ್ಲಿ ಆಡಳಿತ ನಡೆಸಲಾಗುವದು ಎಂದರು.
25 ವರ್ಷಗಳ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸುಲ್ತಾನಪೂರ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಅವಿರೋಧವಾಗುವ ಮೂಲಕ ಇತಿಹಾಸ ಸೃಷ್ಟಿಸಿದೆ. ಇದಕ್ಕೆ ಗ್ರಾಮದ ಮುಖಂಡರು ಮತ್ತು ಸದಸ್ಯರ ಸಹಕಾರ ಕಾರಣ, ಎಲ್ಲರೂ ಸೇರಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆಂದು ಗ್ರಾಮದ ಮುಖಂಡ, ನ್ಯಾಯವಾದಿ ನಿರ್ವಾಣಿ ದೇಮನ್ನವರ ಹೇಳಿದರು.