ಕೈರೋ, 3- ಸತ್ತ ನಂತರ ಮತ್ತೊಂದು ಜೀವನವಿದೆ ಎಂದು ನಂಬಿದ್ದ ಪುರಾತನ ಕಾಲದ ಈಜಿಪ್ತ ನಾಗರಿಕರು ಕೆಡಬಾರದೆಂದು ಶವಗಳಿಗೆ ದ್ರಾವಣ ಹಚ್ಚಿಡುತ್ತಿದ್ದರು. ಹಾಗೆಯೇ ಅವರ ಮತ್ತೊಂದು ಜೀವನಕ್ಕೆ ಬೇಕಾಗುತ್ತದೆಯೆಂದು ಸಾಕಷ್ಟು ಚಿನ್ನವನ್ನು ಶವ ಪೆಟ್ಟಿಗೆಯಲ್ಲಿ ಹಾಕಿಡುತ್ತಿದ್ದರು. ಅದಕ್ಕಿಂತ ಮುಂದುವರೆದು ಶವಗಳಿಗೆ ಮಾತನಾಡಲು ಇರಲೆಂದು ಚಿನ್ನದ ನಾಲಿಗೆಯನ್ನೂ ಶವದ ಬಾಯಿಯಲ್ಲಿ ಇಡುತ್ತಿದ್ದದ್ದು ಕಂಡು ಬಂದಿದೆ.
ಈ ತರಹದ ಚಿನ್ನದ ನಾಲಿಗೆ ಇರುವ, ಸುಮಾರು 2000 ವರ್ಷಗಳಷ್ಟು ಹಿಂದಿನ ಮಮ್ಮಿಯೊಂದು ಈಜಿಪ್ಟನ ಟ್ಯಾಪೋಸಿರಿಸ್ ಮಗ್ನಾ ಸಮಾಧಿ ಸ್ಥಳದಲ್ಲಿ ಪುರಾತತ್ವಜ್ಞರಿಗೆ ದೊರೆತಿದೆ.
ವ್ಯಕ್ತಿಯು ಸತ್ತ ನಂತರವೂ ಆತ ಮಾತನಾಡಲಿ ಎಂಬ ಕಾರಣಕ್ಕೆ ಮೃತದೇಹದೊಂದಿಗೆ ಚಿನ್ನದ ನಾಲಿಗೆ ಇಡುವ ರೂಢಿ ಇತ್ತು. ಚಿನ್ನದ ನಾಲಿಗೆ ಇಟ್ಟರೆ ಸತ್ತ ನಂತರವೂ ಆ ವ್ಯಕ್ತಿ ಮಾತನಾಡಲು ಸಾಧ್ಯವಾಗುತ್ತದೆ ಎಂಬ ನಂಬಿಕೆ ಈಜಿಪ್ಷಿಯನ್ನರಲ್ಲಿತ್ತು. ಹೀಗಾಗಿ ಮೃತದೇಹದೊಂದಿಗೆ ಚಿನ್ನದ ನಾಲಿಗೆ ದೊರೆತಿದೆ ಎಂದು ಈಜಿಪ್ಟ್ ಪ್ರವಾಸೋದ್ಯಮ ಹಾಗೂ ಪುರಾತತ್ವ ಸಚಿವಾಲಯ ತಿಳಿಸಿದೆ.
ಚಿನ್ನದ ನಾಲಗೆಯೊಂದಿಗೆ ಇದ್ದ ಈ ಅಸ್ಥಿಪಂಜರವನ್ನು ಸಂರಕ್ಷಿಸಿಡಲಾಗಿದೆ.
ಅದರ ತಲೆ ಬುರುಡೆ ಹಾಗೂ ದೇಹದ ರಚನೆ ಹಾಗೆಯೇ ಇದ್ದು, ಈ ಮಮ್ಮಿ ಸುಮಾರು 2000 ವರ್ಷಗಳ ಹಿಂದಿನದ್ದು ಎನ್ನಲಾಗಿದೆ. ಸುಮಾರು ಹತ್ತು ವರ್ಷಗಳಿಂದಲೂ ಈ ಕುರಿತು ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಸ್ಯಾಂಟೊ ಡೋಮಿಂಗೋ ವಿಶ್ವವಿದ್ಯಾಲಯ ಇಲ್ಲಿ ಉತ್ಖನನ ಕೆಲಸ ಕೈಗೊಂಡಿದ್ದು, ಈ ಸಂದರ್ಭ ವಿಶೇಷ ಮಮ್ಮಿ ದೊರೆತಿದೆ.
ಇದೇ ಸ್ಥಳದಲ್ಲಿ ಹಲವು ಗೋರಿಗಳಲ್ಲಿ ಮಮ್ಮಿಗಳು ದೊರೆತಿವೆ. ದೇಹದ ಇನ್ನಿತರ ಅಂಗಗಳು ನಾಶವಾಗಿದ್ದರೂ, ಮುಖಗಳನ್ನು ಸಂರಕ್ಷಣೆ ಮಾಡಲಾಗಿದೆ. ವ್ಯಕ್ತಿ ಹೇಗಿದ್ದ ಎಂಬುದರ ಗುರುತು ಪತ್ತೆಗೆ ಇದು ಅನುಕೂಲ ಮಾಡಿಕೊಟ್ಟಿದೆ.