ಬೆಂಗಳೂರು, ಫೆ 03- “ಬಸ್ ಫುಲ್, ಮಾರ್ಕೆಟ್ ಗಿಜಿ ಗಿಜಿ ಆದರೆ ಚಿತ್ರ ಮಂದಿರಗಳೇಕೆ ಭಣಗುಡಬೇಕು” ಎಂದು ನಟ ಧ್ರುವ ಸರ್ಜಾ ಮಾಡಿರುವ ಟ್ವೀಟ್ ಗೆ ಕನ್ನಡ ಚಿತ್ರರಂಗದ ಬಹುತೇಕ ನಟ, ನಿರ್ದೇಶಕರು ಬೆಂಬಲ ನೀಡಿದ್ದಾರೆ.
ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧವಿರುವಾಗ ಚಿತ್ರಮಂದಿರಗಳಲ್ಲಿ ಶೇ 50ರಷ್ಟು ಮಾತ್ರ ಪ್ರೇಕ್ಷಕರಿಗೆ ಅವಕಾಶ ನೀಡಿರುವ ಸರ್ಕಾರದ ನಿಲುವಿಗೆ ಕನ್ನಡ ಚಿತ್ರರಂಗ ಬೇಸರ ವ್ಯಕ್ತಪಡಿಸಿದೆ. ನೆರೆಯ ರಾಜ್ಯಗಳಲ್ಲಿ ಚಿತ್ರಮಂದಿರಗಳಲ್ಲಿ ನೂರಕ್ಕೆ ನೂರರಷ್ಟು ಭರ್ತಿಗೆ ಅವಕಾಶವಿರುವಾಗ ರಾಜ್ಯದಲ್ಲೇಕೆ ಈ ಬಗೆಯ ನೀತಿ ಎಂದು ಪ್ರಶ್ನಿಸಿದೆ.
ಥಿಯೇಟರ್ ಗಳಲ್ಲಿ ಪ್ರೇಕ್ಷಕರ ಚಪ್ಪಾಳೆ, ಶಿಳ್ಳೆ ಹಿಂದಿನಂತೆ ಕೇಳಿಬರಬೇಕು. ಇದಕ್ಕಾಗಿ ಕೇಂದ್ರ ಸರ್ಕಾರದ ಕೊರೋನಾ ನಿಯಮಾವಳಿಯನ್ನು ಖಂಡಿತಾ ಅನುಸರಿಸಲಾಗುತ್ತದೆ ಎಂದು ‘ಪೊಗರು’ ನಿರ್ದೇಶಕ ನಂದಕಿಶೋರ ಸೇರಿದಂತೆ ಹಲವು ನಟರು, ನಿರ್ದೇಶಕರು ಹೇಳಿದ್ದಾರೆ.
ನಿರ್ಮಾಪಕರು ಹಾಕಿರುವ ಹಣ ವಾಪಸ್ ಬರಬೇಕಿದ್ದರೆ ಚಿತ್ರಮಂದಿರ ಭರ್ತಿಯಾಗಬೇಕು. ಕೊರೋನಾ ಲಾಕ್ ಡೌನ್ ಸಡಿಲಿಕೆಯ ಬಳಿಕ ಬಸ್ ಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ದೈಹಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಯಾವ ನಿಯಮವನ್ನೂ ಪಾಲಿಸಲಾಗುತ್ತಿಲ್ಲ. ಹೀಗಿರುವಾಗ ಚಿತ್ರಮಂದಿರಗಳಲ್ಲಿಯೂ ಶೇಕಡ 100ರಷ್ಟು ಭರ್ತಿಗೆ ಅವಕಾಶ ನೀಡಬೇಕು ಎಂದು ನಟ ಧ್ರುವ ಸರ್ಜಾ ಇಂದು ಬೆಳಗ್ಗೆ ಟ್ವೀಟ್ ಮಾಡಿದ ಬೆನ್ನಲ್ಲೇ ನಟರುಗಳಾದ ಡಾಲಿ ಧನಂಜಯ, ದುನಿಯಾ ವಿಜಯ್ ಸೇರಿದಂತೆ ಹಲವರು ಬೆಂಬಲ ನೀಡಿ ದನಿಯೆತ್ತಿದ್ದಾರೆ.
ಈ ಮಧ್ಯೆ ಚಿತ್ರಮಂದಿಗಳಲ್ಲಿ ಶೇಕಡ 100ರಷ್ಟು ಪ್ರೇಕ್ಷಕರ ಭರ್ತಿಗೆ ಅವಕಾಶ ನೀಡುವಂತೆ ಕೋರಿ, ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ ಜೈರಾಜ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.