ಬೆಳಗಾವಿ, 4- ನಗರದ ಒಂದನೇ ರೈಲ್ವೆ ಗೇಟ್ ಬಳಿ ಗೂಡ್ಸ್ ರೈಲಿಗೆ ತಲೆಕೊಟ್ಟು ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದು, ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತ್ನಿಗೆ ಗಂಭೀರ ಗಾಯವಾಗಿದೆ.
ಬೆಳಗಾವಿ ತಾಲೂಕಿನ ಹಿಂಡಲಗಾ ನಿವಾಸಿ, ಮರಾಠಿ ದಿನಪತ್ರಿಕೆಯಲ್ಲಿ ಮುದ್ರಣ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ ಪಾಟೀಲ ಮತ್ತು ಅವರ ಪತ್ನಿ ಅಸ್ಮಿತಾ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿ ನಿನ್ನೆ ಬುಧವಾರ ರಾತ್ರಿ ಟಿಳಕವಾಡಿ ರೇಲ್ವೆ ಮೊದಲನೇ ಗೇಟ್ ಬಳಿ ಬಂದು ರೈಲ್ವೆ ಹಳಿಗಳ ಬದಿ ರೈಲು ಬರುವದನ್ನು ಕಾಯುತ್ತಿದ್ದರು. ಗೂಡ್ಸ ರೈಲು ಬಂದಾಗ ಹಳಿ ಮೇಲೆ ಇಬ್ಬರೂ ಜಿಗಿದಿದ್ದಾರೆ. ಟ್ರ್ಯಾಕ್ ಮೇಲೆ ಬಿದ್ದ ರಾಕೇಶ ಸ್ಥಳದಲ್ಲೇ ಅಸುನೀಗಿದ್ದು, ಅವರ ಪತ್ನಿ ಟ್ರ್ಯಾಕ್ ಹೊರಗೆ ಇದ್ದುದರಿಂದ ರೈಲು ಬಡಿದು ಹಿಂದಕ್ಕೆ ಬಿದ್ದು ಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣವೆನ್ನಲಾಗಿದೆ. ಸ್ಥಳಕ್ಕೆ ಬೆಳಗಾವಿ ರೇಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.