ಅರಸೀಕೆರೆ, 5- ಪ್ರಯಾಣಿಕರೊಬ್ಬರಿಂದ 5 ರೂಪಾಯಿ ನೋಟು ಸ್ವೀಕರಿಸಲು ನಿರಾಕರಿಸಿದ ಕಂಡಕ್ಟರ್ ಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 1,000 ರೂಪಾಯಿ ದಂಡ ವಿಧಿಸಿದೆ.
ಸೋಮಶೇಖರ ಎನ್ನುವವರು ಅರಸಿಕೆರೆಯಿಂದ ತಿಪಟೂರಿಗೆ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. 35 ರೂಪಾಯಿ ಟಿಕೆಟ್ ಗೆ 10 ರೂಪಾಯಿಯ 3 ನೋಟು ಮತ್ತು 5 ರೂಪಾಯಿಯ ಒಂದು ನೋಟನ್ನು ಅವರು ನೀಡಿದರು.
ಆದರೆ 5 ರೂಪಾಯಿ ನೋಟನ್ನು ನಿರಾಕರಿಸಿದ ಕಂಡಕ್ಟರ್ ಗಲಾಟೆ ಮಾಡಿ ಪ್ರಯಾಣಿಕನನ್ನು ಬಸ್ ನಿಂದ ಕೆಳಗಿಳಿಸಲು ಮುಂದಾಗಿದ್ದ. ತಕ್ಷಣ ಸೋಮಶೇಖರ ಅವರು ತಿಪಟೂರು ಗ್ರಾಮಾಂತರ ಪೊಲೀಸರಿಗೆ ದೂರು ಸಲ್ಲಿಸಿದರು. ಪೊಲೀಸರು 5 ರೂಪಾಯಿ ನೋಟು ಸ್ವೀಕರಿಸುವಂತೆ ಕಂಡಕ್ಟರ್ ಗೆ ತಾಕೀತು ಮಾಡಿ ಕಳಿಸಿದ್ದರು.
ಕಂಡಕ್ಟರ್ ವರ್ತನೆಗೆ ಅಸಮಾಧಾನಗೊಂಡ ಪ್ರಯಾಣಿಕ ಸೋಮಶೇಖರ, ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ದೂರನ್ನು ಸಲ್ಲಿಸಿದ್ದರು. ಅವರು ವಿಚಾರಣೆ ನಡೆಸಿ ಕಂಡಕ್ಟರ್ ಗೆ 1,000 ರೂಪಾಯಿ ದಂಡ ವಿಧಿಸಿದ್ದಾರೆ.