ಬಾಗಲಕೋಟ, 5- ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಮುಖಂಡ ಸಂತೋಷ ಹೊಕ್ರಾಣಿ ಮನೆಗೆ ಭೇಟಿ ನೀಡಿದ ಹಿನ್ನಲೆಯಲ್ಲಿ ಸಂತೋಷ ಅವರನ್ನು ಪಕ್ಷದಿಂದಲೇ ಬಿಜೆಪಿ ಉಚ್ಛಾಟನೆ ಮಾಡಿದೆ.
ಇದರಿಂದ ಸಂತೋಷ ಬೇಸರಗೊಂಡಿದ್ದು, 18 ವರ್ಷ ಪಕ್ಷಕ್ಕಾಗಿ ದುಡಿದಿದ್ದಕ್ಕೆ ಈ ಶಿಕ್ಷೆಯೇ ಎಂದು ಪ್ರಶ್ನಿಸಿದ್ದಾರೆ. ತಮ್ಮ ಉಚ್ಛಾಟನೆ ಹಿಂದೆ ಶಾಸಕ ವೀರಣ್ಣ ಚರಂತಿಮಠ ಸಂಚಿದೆ ಎಂದಿದ್ದಾರೆ.
ಉಚ್ಚಾಟನೆಯ ನಂತರ ಬಾಗಲಕೋಟದಲ್ಲಿ ಮಾತನಾಡಿದ ಅವರು, 18 ವರ್ಷ ಬಿಜೆಪಿಯಲ್ಲಿ ಕೆಲಸ ಮಾಡಿದ್ದಕ್ಕೆ ಪಕ್ಷ ತಮಗೆ ಈ ದೊಡ್ಡ ಬಹುಮಾನ ಕೊಟ್ಟಿದೆ, ಇದಕ್ಕಾಗಿ ತಾವು ಚಿರಋಣಿ. ಯಾವ ಕಾರಣಕ್ಕೆ ತಮ್ಮನ್ನು ಉಚ್ಛಾಟಿಸಲಾಗಿದೆ ಎನ್ನುವದನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.
ಚರಂತಿಮಠ ಅವರ ಚುನಾವಣೆಯಲ್ಲಿ ದುಡಿದಿದ್ದುದಾಗಿ ಹೇಳಿರುವ ಸಂತೋಷ, “ನಿಮಗಾಗಿ ಕೆಲಸಮಾಡಿದವರಿಗೆ ಕೊಡುವ ಬಹುಮಾನ ಇದೇನಾ ? ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಕ್ಕೆ ಹೀಗಾ ? ಯಾಕೆ ನಿಮಗೆ ಭಯ ಕಾಡುತ್ತಿದೆಯೇ? ಕುಮಾರಸ್ವಾಮಿ ನಮ್ಮ ಮನೆಗೆ ಬಂದಿದ್ದು ಪಕ್ಷ ವಿರೋಧಿ ಚಟುವಟಿಕೆಯೇ ? ನಿಮ್ಮ ಮನೆಗೆ ಬೇರೆ ಪಕ್ಷದವರು ಬರುವುದಿಲ್ಲವೇ ಅಥವಾ ನೀವು ಹೋಗುವುದಿಲ್ಲವೇ” ಎಂದು ಶಾಸಕ ವೀರಣ್ಣ ಚಿರಂತಿಮಠ ಅವರಿಗೆ ಪ್ರಶ್ನಿಸಿದ್ದಾರೆ.
ಇಂತಹ ರಾಜಕಾರಣ ಬೇಸರ ತಂದಿದೆ. ಇದಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷರು ಪರಿಹಾರ ನೀಡಬೇಕು ಎಂದು ಸಂತೋಷ ಆಗ್ರಹಿಸಿದ್ದಾರೆ.