ಬೆಂಗಳೂರು,ಫೆ.6 – ಮೋದಿ ಸರ್ಕಾರದ ಮೂರು ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ಇಂದು ಮಧ್ಯಾಹ್ನ 12ರಿಂದ 3 ಗಂಟೆಯವರಗೆ ಕರೆ ನೀಡಿರುವ ಹೆದ್ದಾರಿ ತಡೆಗೆ ರಾಜ್ಯದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಜ್ಯಾದ್ಯಂತ ರೈತರು ರಸ್ತೆ ತಡೆ ನಡೆಸಿದ್ದಾರೆ.
ಬೆಂಗಳೂರು ಹೊರವಲಯದ ಯಲಹಂಕದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಕುರುಬೂರು ಶಾಂತಕುಮಾರ ಮತ್ತು ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಾಂತಕುಮಾರ ನೇತೃತ್ವದಲ್ಲಿ ಯಲಹಂಕದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನೆ ತೆರವುಗೊಳಿಸುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪದ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಬಿಎಂಟಿಸಿ ಬಸ್ ಗಳಲ್ಲಿ ಕರೆದೊಯ್ದರು
ಇನ್ನು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕನ್ನಡ ವಾಟಾಳ ಪಕ್ಷದ ಮುಖಂಡ ವಾಟಾಳ ನಾಗರಾಜ ಹಾಗೂ ಇತರರನ್ನು ಪೊಲೀಸರು ವಶಕ್ಕೆ ಪಡೆದರು.
ಹಾರೆ ಪಿಕ್ಕಾಸುಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ವಾಟಾಳ ಅವರು ಕೃಷಿ ಕಾಯ್ದೆಯನ್ನು ಹಿಂಪಡೆಯಲುವಂತೆ ಒತ್ತಾಯಿಸಿದರು.
ಇದಕ್ಕೂ ಮೊದಲು ಮಾತನಾಡಿದ ವಾಟಾಳ, ರೈತ ವಿರೋಧಿ ಕೃಷಿ ಮಸೂದೆಯನ್ನು ಹಿಂಪಡೆಯಬೇಕು. ಮೋದಿ ಸರ್ಕಾರ ರೈತರ ವಿರೋಧಿ ಸರ್ಕಾರವಾಗಿದ್ದು, ಹಿಟ್ಲರ್ ಸರ್ಕಾರವಾಗಿದೆ. ರೈತರ ಪರವಾಗಿ ವಾಟಾಳ ಪಕ್ಷ ನಿಲ್ಲಲಿದೆ ಎಂದರು.
ತಂತಿಬೇಲಿ, ಮೊಳೆ ಹಾಕಿ ರೈತರ ಹೋರಾಟ ಹತ್ತಿಕ್ಕಲು ಮೋದಿ ಸರ್ಕಾರ ಪ್ರಯತ್ನಿಸಿದೆ. ಅದಕ್ಕೆ ವಿರುದ್ಧವಾಗಿ ನಾವು ಗುದ್ದಲಿ ಪ್ರತಿಭಟನೆ ನಡೆಸಿದ್ದೇವೆ. ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಅತ್ಯಂತ ಕೆಟ್ಟ ಸರ್ಕಾರವಾಗಿದ್ದು, ಯಡಿಯೂರಪ್ಪ ಜಾತಿ ಜಾತಿಗಳ ನಡುವೆ ಒಡಕನ್ನು ತರುತ್ತಿದ್ದಾರೆ ಎಂದು ಆರೋಪಿಸಿದರು.
ಕೋಲಾರ – ಬಂಗಾರಪೇಟೆ ರಾಜ್ಯ ಹೆದ್ದಾರಿಯಲ್ಲಿ ಮುಳ್ಳು ತಂತಿ ಹಿಡಿದು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಹಂಚಾಳ ಗೇಟ್ ಬಳಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ದಾವಣಗೆರೆಯ ಲಕ್ಕಮುತೇನಹಳ್ಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ತಾಲೂಕಿನ ಲಕ್ಕಮುತೇನ ಹಳ್ಳಿ ಹೆದ್ದಾರಿ ತಡೆಯಿಂದ ಒಂದು ಕಿಲೋ ಮೀಟರ್ ವರೆಗೂ ಸಾಲಾಗಿ ವಾಹನಗಳು ನಿಂತಿವೆ.
ಧಾರವಾಡ ಮತ್ತು ಬಳ್ಳಾರಿಗಳಲ್ಲೂ ಹೆದ್ದಾರಿ ತಡೆ ನಡೆಸಲಾಗಿದೆ. ಬಳ್ಳಾರಿಯ ಹೊರವಲಯದ ಹೊಸಪೇಟೆ ರಸ್ತೆಯ ಬೈಪಾಸ್ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.