ಭೋಪಾಲ, ಫೆ 6- ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಕಳೆದ 70 ದಿನಗಳಿಂದ ದೆಹಲಿಯ ಹೊರ ವಲಯದಲ್ಲಿ ರೈತರ ಬೃಹತ್ ಪ್ರತಿಭಟನೆ ಮುಂದುವರಿದಿರುವ ಹಿನ್ನಲೆಯಲ್ಲಿ ಕೃಷಿ ಕಾನೂನುಗಳಿಗೆ ಮುಖ್ಯ ಕಾರಣಕರ್ತರಾದ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ ಷಾ ವಿರುದ್ಧ ನೇರ ಆಪಾದನೆ ಮಾಡದೇ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ವಿರುದ್ಧ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನಾಯಕ, ಬಿಜೆಪಿಯ ಮಾಜಿ ರಾಜ್ಯಸಭಾ ಸದಸ್ಯ ರಘುನಂದನ ಶರ್ಮಾ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
ಇವರಿಗೆ ಅಧಿಕಾರದ ಮದ ತಲೆಗೇರಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶಭಕ್ತಿಯನ್ನು ಕಾಪಾಡಿಕೊಳ್ಳುವ ಶಕ್ತಿ -ಯುಕ್ತಿ ಸರ್ಕಾರಕ್ಕೆ ಇಲ್ಲದಿದ್ದರೆ, ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಶರ್ಮಾ ತಮ್ಮ ಅಧಿಕೃತ ಫೇಸಬುಕ್ ಖಾತೆಯಲ್ಲಿ ಎಚ್ಚರಿಸಿದ್ದಾರೆ.
‘ನರೇಂದ್ರ ಜೀ … ನೀವೂ ಸರ್ಕಾರದ ಭಾಗ. ನಿಮ್ಮ ಉದ್ದೇಶ ರೈತರಿಗೆ ಒಳ್ಳೆಯದನ್ನು ಮಾಡುವುದು ಆಗಿರಬಹುದು, ಆದರೆ ಕೆಲವರು ಸಹಕರಿಸಲು ಬಯಸದಿದ್ದಾಗ, ಅಂತಹ ಒಳ್ಳೆಯ ಕೆಲಸದಿಂದ ಏನು ಪ್ರಯೋಜನ? ಕೆಲವರು ದಿಗಂಬರರಾಗಿ ಇರಲು ಬಯಸಿದರೆ, ಬಲವಂತದಿಂದ ಬಟ್ಟೆ ತೊಡಿಸಲು ಪ್ರಯತ್ನಿಸಿದರೆ ಏನು ಪ್ರಯೋಜನ? ‘ ಎಂದು 73 ವರ್ಷದ ಆರ್ಎಸ್ಎಸ್ ಮುಖಂಡ ಶರ್ಮಾ ಪ್ರಶ್ನಿಸಿದ್ದಾರೆ.
ಈ ದಿನಗಳಲ್ಲಿ ಅಧಿಕಾರದ ಮದ ನಿಮ್ಮ ತಲೆಗೇರಿದೆ. ಜನಾಭಿಪ್ರಾಯವನ್ನು ಕಳೆದುಕೊಳ್ಳಲು ಏಕೆ ನೀವು ಬಯಸುತ್ತೀದ್ದೀರಿ ? ನಾವು ನಮ್ಮ ಸ್ವಂತ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೊಳೆತ ಕಾಂಗ್ರೆಸ್ ನೀತಿಗಳನ್ನು ಜಾರಿಗೊಳಿಸಲು ಹೋಗುತ್ತಿದ್ದೇವೆ. ಸಣ್ಣ ರಂಧ್ರದಿಂದ ನೀರು ಸುರಿಯಲು ಆರಂಭಿಸಿದರೆ ಕೊಡ ಖಾಲಿಯಾಗುತ್ತದೆ. ಅದೇ ರೀತಿ ಸಾರ್ವಜನಿಕರ ಅಭಿಪ್ರಾಯ ಅದೇ ರೀತಿ ಆಗಿರಲಿದೆ ”ಎಂದು ಶರ್ಮಾ ಹೇಳಿದ್ದಾರೆ.
ದೇಶ ಪ್ರೇಮವನ್ನು ಎತ್ತಿಹಿಡಿಯುವಲ್ಲಿ ಸರ್ಕಾರ ತನ್ನ ಎಲ್ಲ ಶಕ್ತಿಯನ್ನು ಕೇಂದ್ರೀಕರಿಸಬೇಕು, ಇಲ್ಲದಿದ್ದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಸಿದ್ಧಾಂತ ಸಂರಕ್ಷಣೆಯ ಬಗ್ಗೆ ನಿಮಗೆ ತಿಳಿದಿದೆ ಎಂದು ಭಾವಿಸಿರುವುದಾಗಿ ಅವರು ಹೇಳಿದ್ದಾರೆ.