ಬೆಂಗಳೂರು: ಫೆ.9 – ವಿಧಾನ ಪರಿಷತ್ ನಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರದ ವೇಳೆ ಆಡಳಿತ ಪಕ್ಷ ನಡೆದುಕೊಂಡ ರೀತಿಯಿಂದ ಸದನದ ಗೌರವಕ್ಕೆ ಧಕ್ಕೆಯಾಗಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣ ಸ್ವಾಮಿ ಟೀಕಿಸಿದ್ದಾರೆ.
ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಚರ್ಚೆ ನಡೆಯುತ್ತಿತ್ತು. ವಂದನಾ ಚರ್ಚೆಯ ಭಾಷಣ ಮೊಟಕುಗೊಳಿಸಿ ಗೋಹತ್ಯೆ ನಿಷೇಧ ವಿಧೇಯಕವನ್ನು ಕೈಗೆತ್ತಿಕೊಳ್ಳಲಾಯಿತು. ಇದರ ತುರ್ತು ಅಗತ್ಯ ಏನಿತ್ತು? ಏಕಾಏಕಿ ಉಪಸಭಾಪತಿ ಮಸೂದೆ ಅಂಗೀಕಾರ ಮಾಡಿದ್ದಾರೆ. ಈ ಮೂಟಲಕ ಸದನದ ನಿಯಮ ಗಾಳಿಗೆ ತೂರಿದ್ದಾರೆ. ಯಾವುದೋ ಸಮುದಾಯದ ಓಲೈಕೆಗಾಗಿ ಮಸೂದೆ ಜಾರಿಗೊಳಿಸಲಾಗಿದೆ. ಇದರ ವಿರುದ್ಧ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಕೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಸದಸ್ಯ ಸಿ.ಎಂ. ಇಬ್ರಾಹಿಂ ಮಾತನಾಡಿ, ಗೋಹತ್ಯೆ ನಿಷೇಧ ವಿಧೇಯಕ ವಿಧಾನಪರಿಷತ್ ನಲ್ಲಿ ಅಂಗೀಕಾರ ಮಾಡಿದ ರೀತಿ ಸರಿಯಿಲ್ಲ. ಕರ್ನಾಟಕ ಇತಿಹಾಸದಲ್ಲಿ ಇಂತಹ ಸರ್ಕಾರ ಇರಲಿಲ್ಲ. ಸದನದಲ್ಲಿ ನಿಯಮ ನಡವಳಿಕೆಯನ್ನು ಗಾಳಿಗೆ ತೂರಲಾಗಿದೆ. ಉಪಸಭಾಪತಿ ಏಕಾಏಕಿ ಕಾನೂನು ಪಾಸ್ ಮಾಡಿದ್ದಾರೆ. ವಿಧೇಯಕ ಮತಕ್ಕೆ ಹಾಕಿದರೆ ಸೋಲಾಗುತ್ತಿತ್ತು. ಈಗಲೂ ಮತಕ್ಕೆ ಹಾಕಿ ಎಂದು ಇಬ್ರಾಹಿಂ ಆಗ್ರಹಿಸಿದರು.
ವಿಧೇಯಕ ಮಂಡನೆ ಸಂದರ್ಭದಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ. ಮುಖ್ಯಮಂತ್ರಿ ರಿಮೋಟ ಕಂಟ್ರೋಲ್ ನಲ್ಲಿ ಇದನ್ನು ನಡೆಸಿದ್ದಾರೆ. ನಮ್ಮನ್ನು ಹೊಡೆಯುವುದೊಂದು ಬಾಕಿ ಇತ್ತು, ನಾಲ್ಕು ಜನ ಹೆಚ್ಚಾದರೆ ನಮ್ಮನ್ನು ಹೊಡೆದು ಹೊರಗೆ ಹಾಕುತ್ತಾರೆ. ಇವರಿಗೆ ಮಾನ ಮರ್ಯಾದೆ ಏನೂ ಇಲ್ಲ ಎಂದು ಇಬ್ರಾಹಿಂ ಕಿಡಿ ಕಾರಿದರು.
ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ, ಅಗತ್ಯ ಇದ್ದರೆ ಬೀದಿ ಹೋರಾಟವನ್ನೂ ನಡೆಸಲಾಗುವುದು. ಹೀಗೆ ಮಾಡುತ್ತಾ ಹೋದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಸದನ ಜಾರಿಯಲ್ಲಿ ಇಲ್ಲದೆ ಇದ್ದಾಗ ಬಿಲ್ ಅಂಗೀಕಾರ ಮಾಡಿದ್ದಾರೆ ಎಂದು ದೂರಿದರು.
ನಾನು ಕಾಂಗ್ರೆಸ್ಸಿಗ , ಕಾಂಗ್ರೆಸ್ ಏನು ಹೇಳುತ್ತದೆಯೋ ಅದಕ್ಕೆ ನಾನು ಬದ್ಧ. ಇತರ ರಾಜಕೀಯ ಮುಖಂಡರೊಡನೆ ಸಂಬಂಧ ಕೇವಲ ವೈಯಕ್ತಿಕ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪರಿಷತ್ ಸದಸ್ಯ ಪಿ.ಆರ್. ರಮೇಶ ಮಾತನಾಡಿ, ಮೋದಿಯವರ ಕಾರ್ಪೊರೇಟ್ ಸಂಸ್ಥೆಗಳ ಉದ್ದಾರಕ್ಕೆ ಈ ಬಿಲ್ ತಂದಿದ್ದಾರೆ. ಬೀಫ್ ಮಾರಾಟ ಮಾಡಲು, ತಿನ್ನಲು ನಿಷೇಧ ಹೇರದೆ ದ್ವಂದ್ವ ನಿಲುವಿನ ಮಸೂದೆ ಇದಾಗಿದ್ದು, ಬೀಫ್ ರಫ್ತು ನಿಷೇಧಿಸುವ ಧೈರ್ಯ ತೋರಲಿ ಎಂದು ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದರು.
ಪರಿಷತ್ ಸದಸ್ಯ ನಜೀರ್ ಅಹ್ಮದ್ ಮಾತನಾಡಿ, ಸದನದಲ್ಲಿ ಬಿಲ್ ವಿರೋಧಿಸಿದ ಜೆಡಿಎಸ್ ಕೂಡ ರಾಜ್ಯಪಾಲರಿಗೆ ದೂರು ಕೊಟ್ಟು ಬದ್ಧತೆ ತೋರಲಿ. ಇಲ್ಲದಿದ್ದರೆ ಜೆಡಿಎಸ್ ಬಿಜೆಪಿ ಮ್ಯಾಚ್ ಫಿಕ್ಸಿಂಗ್ ಸಾಬೀತಾಗುತ್ತದೆ ಎಂದು ಹೇಳಿದರು.