ಬೆಂಗಳೂರು: ಫೆ.9 – ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ನಡೆಸಲಾದ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಗಳವಾರ ಕಲಾಪ ಆರಂಭವಾಗುತ್ತಿದ್ದಂತೆ ಧರಣಿ ಆರಂಭಿಸಿದ ಕಾಂಗ್ರೆಸ್ ಸದಸ್ಯರು, ಸೋಮವಾರ ಜಾನುವಾರು ಹತ್ಯೆ ನಿಷೇಧ ಮಸೂದೆಯ ಮೇಲೆ ಮತ ವಿಭಜನೆಗೆ ಆಗ್ರಹಿಸಿದ ತಮ್ಮ ಬೇಡಿಕೆಯನ್ನು ಪರಿಗಣಿಸಿಲ್ಲ ಎಂದು ಆಕ್ರೋಶ ಹೊರಹಾಕಿದರು. ನಿನ್ನೆಯ ಕಲಾಪದ ದೃಶ್ಯಾವಳಿ ಪರಿಶೀಲಿಸುವಂತೆ ಪಟ್ಟು ಹಿಡಿದರು.
ಧರಣಿ ಕೈಬಿಟ್ಟು ಸಭಾಪತಿ ಚುನಾವಣೆ ಪ್ರಕ್ರಿಯೆ ನಡೆಸಲು ಸಹಕಾರ ನೀಡುವಂತೆ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಮನವಿ ಮಾಡಿದರು. ಸೋಮವಾರದ ಘಟನೆಯ ಪರಿಶೀಲನೆಯ ಭರವಸೆ ನೀಡಿದರು.
ಆದರೆ, ಕಾಂಗ್ರೆಸ್ ಸದಸ್ಯರು ಧರಣಿ ಹಿಂಪಡೆಯಲು ನಿರಾಕರಿಸಿದರು. ಧರಣಿ ನಡುವೆಯೇ ಉಪ ಸಭಾಪತಿ ಚುನಾವಣಾ ಪ್ರಕ್ರಿಯೆ ಆರಂಭಿಸಿದರು.
ಜೆಡಿಎಸ್ ಸದಸ್ಯರಾದ ಕೆ.ವಿ. ನಾರಾಯಣಸ್ವಾಮಿ, ಎನ್. ಅಪ್ಪಾಜಿಗೌಡ ಅವರು ಹೊರಟ್ಟಿ ಪರವಾಗಿ ಪ್ರಸ್ತಾವ ಮಂಡಿಸಿದರು. ಜೆಡಿಎಸ್ ನ ಕೆ.ಟಿ. ಶ್ರೀಕಂಠೇಗೌಡ ಮತ್ತು ಕೆ.ಎ. ತಿಪ್ಪೇಸ್ವಾಮಿ ಅನುಮೋದಿಸಿದರು.
ಕಾಂಗ್ರೆಸ್ ಅಭ್ಯರ್ಥಿಯಾಗಿ ನಜೀರ ಅಹ್ಮದ ನಾಮಪತ್ರ ಸಲ್ಲಿಸಿದ್ದರು. ಆದರೆ, ಧರಣಿ ಮುಂದುವರಿಸಿದ ಕಾಂಗ್ರೆಸ್ ಸದಸ್ಯರು ಸಭಾಪತಿ ಚುನಾವಣೆಯಿಂದ ದೂರ ಉಳಿದರು. ಈ ಹಿನ್ನೆಲೆಯಲ್ಲಿ ಬಸವರಾಜ ಹೊರಟ್ಟಿ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ ಎಂದು ಉಪ ಸಭಾಪತಿ ಘೋಷಿಸಿದರು. ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮತ್ತು ಇತರ ಸಚಿವರು ಹೊರಟ್ಟಿ ಅವರನ್ನು ಸಭಾಪತಿ ಪೀಠಕ್ಕೆ ಕರೆತಂದರು.