ಇಸ್ಲಾಮಾಬಾದ: 9- ದುಷ್ಕರ್ಮಿಗಳಿಂದ ಧ್ವಂಸಗೊಂಡಿರುವ ಶತಮಾನಗಳ ಇತಿಹಾಸ ಹೊಂದಿದ್ದ ಹಿಂದೂ ದೇವಾಲಯವನ್ನು ಕೂಡಲೇ ಪುನರ್ ನಿರ್ಮಾಣ ಮಾಡಬೇಕು ಎಂದು ಸರ್ಕಾರಕ್ಕೆ ಪಾಕಿಸ್ತಾನ ಸುಪ್ರೀಮ ಕೋರ್ಟ ಆದೇಶಿಸಿದೆ. ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಸಮಯದ ಬಗ್ಗೆ ತಿಳಿಸುವಂತೆಯೂ ಅದು ಸೂಚಿಸಿದೆ.
ಕಳೆದ ಡಿಸೆಂಬರನಲ್ಲಿ ಪಾಕಿಸ್ತಾನದ ಮತಾಂಧ ಜಮೈತ್ ಉಲೇಮಾ -ಇ- ಇಸ್ಲಾಮ ಪಕ್ಷದ ಸದಸ್ಯರು ಕಾರಕ್ ಜಿಲ್ಲೆಯ ಟೆರ್ರಿ ಗ್ರಾಮದಲ್ಲಿನ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ್ದರು. ಈ ಘಟನೆಯನ್ನು ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮುಖಂಡರು ತೀವ್ರವಾಗಿ ಖಂಡಿಸಿದ್ದರು.
ಮುಖ್ಯ ನ್ಯಾಯಾಧೀಶ ಗುಲ್ಜಾರ ಅಹ್ಮದ ನೇತೃತ್ವದ ಮೂವರು ನ್ಯಾಯಾಧೀಶರನ್ನೊಳಗೊಂಡ ಪೀಠವು ಸೋಮವಾರ ದೇವಾಲಯ ಧ್ವಂಸಕ್ಕೆ ಸಂಬಂಧಿಸಿದ ಸ್ವಯಂ ಪ್ರೇರಿತ ಕೇಸಿನ ವಿಚಾರಣೆ ನಡೆಸಿತು ಎಂದು ಎಕ್ಸಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ದೇವಾಲಯ ಧ್ವಂಸಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದವರ ಬಗ್ಗೆ ಮಾಹಿತಿ ನೀಡುವಂತೆ ವಿಚಾರಣೆ ವೇಳೆ ನ್ಯಾಯಾಧೀಶ ಗುಲ್ಜಾರ ಹೇಳಿದರು. ದೇವಾಲಯ ಸುಟ್ಟು ಹಾಕಿದ್ದವರಿಂದ ಹಣ ವಸೂಲು ಮಾಡಿಕೊಳ್ಳುವಂತೆ ಪ್ರಾಂತೀಯ ಸರ್ಕಾರಕ್ಕೆ ಕಳೆದ ತಿಂಗಳು ಸುಪ್ರೀಮ ಕೋರ್ಟ್ ಆದೇಶಿಸಿತ್ತು.
ಈ ವರೆಗೂ ಯಾವುದೇ ಹಣವನ್ನು ವಶಪಡಿಸಿಕೊಂಡಿಲ್ಲ, ಆದರೆ ದೇವಾಲಯ ನಿರ್ಮಾಣಕ್ಕಾಗಿ 30.41 ಮಿಲಿಯನ್ ಹಣವನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಇವ್ಯಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ವಕೀಲ ಇಕ್ರಾಂ ಚೌಧರಿ ನ್ಯಾಯಾಲಯಕ್ಕೆ ಹೇಳಿದ್ದಾರೆ. ಇವ್ಯಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ಮುಖ್ಯಸ್ಥರಿಗೂ ಸಮನ್ಸ್ ನೀಡಿ, ಇಲ್ಲಿಯವರೆಗೂ ಆಗಿರುವ ಪ್ರಗತಿ ಬಗ್ಗೆ ಸಮಗ್ರ ವರದಿಯೊಂದನ್ನು ಸಲ್ಲಿಸುವಂತೆ ನ್ಯಾಯಾಧೀಶ ಗುಲ್ಜಾರ ಹೇಳಿದ್ದಾರೆ.