ಬೆಳಗಾವಿ: ಫೆ. 9 : ಸುಂದರವಾದ ಶಹರದ ನಿರ್ಮಾಣದ ಗುರಿಯನ್ನು ನಾವು ಹೊಂದಿದ್ದು, ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 5 ಕೋಟಿ ವೆಚ್ಚದಲ್ಲಿ ಈ ಭಾಗದ ಎಲ್ಲ ಜನರ ಸಹಕಾರದಿಂದ ಕಣಬರಗಿ ಕೆರೆಯನ್ನು ರಾಜ್ಯದಲ್ಲಿ ಮಾದರಿ ಕೆರೆಯಾಗಿ ಅಭಿವೃದ್ಧಿಪಡಿಸಲಾಗಿದೆ. ಬೆಳಗಾವಿಯ ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಬೆನಕೆ ಹೇಳಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಹೊರವಲಯದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕಣಬರಗಿ ಕೆರೆಯನ್ನು ಮಂಗಳವಾರ ಸಂಜೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಬರುವ ದಿನಗಳಲ್ಲಿ ಉತ್ತಮ ರಸ್ತೆಗಳ ನಿರ್ಮಾಣ ಮಾಡಲಾಗುವದು ಹಾಗೂ ಈ ಕೆರೆಯು ನಮ್ಮೆಲ್ಲರ ಅಸ್ತಿಯಾಗಿದ್ದು, ಇದರ ನಿರ್ವಹಣೆ ಕೇವಲ ಮಹಾನಗರ ಪಾಲಿಕೆಯ ಜವಾಬ್ದಾರಿ ಆಗಿರದೆ ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಎಲ್ಲಾ ಹಿರಿಯ ಕಿರಿಯರಿಗೆ ದೊರಕಬೇಕಾದ ಸೌಲಭ್ಯ ಗಲನ್ನು ಗಮನದಲ್ಲಿ ಇಟ್ಟುಕೊಂಡು ಈ ಒಂದು ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಹೇಳಿದರು.
ಗಾರ್ಡನ್, ಸಣ್ಣ ಕಾರ್ಯಕ್ರಮ ನಡೆಸಲು ಒಂದು ಹೊರಾಂಗಣ ಭವನವನ್ನು ನಿರ್ಮಾಣ ಮಾಡಲಾಗಿದೆ. ಉತ್ತಮ ಕ್ಯಾಂಟೀನ್, ಕುಡಿಯುವ ನೀರು, ಶೌಚಾಲಯ ಹಾಗೂ ಎಲ್ಲಾ ಮೂಲಭೂತ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತರಾದ ಜಗದೀಶ ಕೆ.ಎಚ್., ಕಣಬರಗಿಯ ಹಿರಿಯರಾದ ಮುರುಘೇಂದ್ರಗೌಡ ಪಾಟೀಲ, ಸಿ.ಎಸ್.ಬಿಡ್ನಲ್, ಎನ್ .ನಿರ್ವಾಣಿ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.