ಚೆನ್ನೈ: ಫೆ 15 – ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಅವರ ಶತಕ ಹಾಗೂ ನಾಯಕ ವಿರಾಟ ಕೊಹ್ಲಿ ಅವರ ಅರ್ಧ ಶತಕದ ನೆರವಿನಿಂದ ಭಾರತ ನೀಡಿದ 482 ರನ್ ಗೆಲುವಿನ ಗುರಿ ಪಡೆದಿರುವ ಪ್ರವಾಸಿ ಇಂಗ್ಲೆಂಡ್ ಆರಂಭಿಕ ಆಘಾತದಿಂದ ತತ್ತರಿಸಿದೆ.
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನ ಭಾರತ 1 ವಿಕೆಟ್ ಗೆ 54 ರನ್ ನಿಂದ ಆಟ ಮುಂದುವರಿಸಿ ಚಹಾ ವಿರಾಮದ ನಂತರ ಎರಡನೇ ಇನಿಂಗ್ಸ್ ನಲ್ಲಿ 286 ರನ್ ಗೆ ಆಲೌಟಾಯಿತು.
ಮೊದಲ ಇನಿಂಗ್ಸ್ ನಲ್ಲಿ 195 ರನ್ ಹಿನ್ನಡೆ ಅನುಭವಿಸಿದ್ದ ಇಂಗ್ಲೆಂಡ್ ಗೆಲ್ಲಲು 482 ರನ್ ಗಳ ಕಠಿಣ ಸವಾಲು ಪಡೆದಿದ್ದು, ದಿನದಾಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 52 ರನ್ ಗಳಿಸಿದೆ.
ಅಕ್ಸರ್ ಪಟೇಲ್ 2 ಮತ್ತು ಆರ್.ಅಶ್ವಿನ್ 1 ವಿಕೆಟ್ ಪಡೆದು ಪ್ರವಾಸಿ ತಂಡಕ್ಕೆ ಆಘಾತ ನೀಡಿದರು. ಇನ್ನೂ 2 ದಿನದಾಟ ಬಾಕಿ ಉಳಿದಿದ್ದು, ಇಂಗ್ಲೆಂಡ್ ಉಳಿದ 7 ವಿಕೆಟ್ ಗಳಿಂದ 430 ರನ್ ಗಳಿಸಬೇಕಾಗಿದೆ.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ಒಂದು ಹಂತದಲ್ಲಿ 106 ರನ್ ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ವಿರಾಟ್ ಕೊಹ್ಲಿ ಮತ್ತು ಅಶ್ವಿನ್ 96 ಜೊತೆಯಾಟದ ಮೂಲಕ ತಂಡವನ್ನು ಮುನ್ನಡೆಸಿದರು.
ಅಶ್ವಿನ್ 148 ಎಸೆತಗಳಲ್ಲಿ 14 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದ 106 ರನ್ ಬಾರಿಸಿ ಔಟಾದರು. ಈ ಮೂಲಕ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ 5ನೇ ಶತಕ ಗಳಿಸಿದ ಗೌರವಕ್ಕೆ ಪಾತ್ರರಾದರು. ಅಲ್ಲದೇ 3ನೇ ಬಾರಿ 100 ರನ್ ಮತ್ತು 5 ವಿಕೆಟ್ ಪಡೆದ ಸಾಧನೆ ಮಾಡಿದರು.
ಮತ್ತೊಂದು ತುದಿಯಲ್ಲಿ ಫಾರ್ಮ್ ಕಂಡುಕೊಂಡ ವಿರಾಟ ಕೊಹ್ಲಿ 149 ಎಸೆತಗಳಲ್ಲಿ 7 ಬೌಂಡರಿ ಸೇರಿದ 62 ರನ್ ಬಾರಿಸಿ ಔಟಾದರು. ಈ ಮೂಲಕ ಕೊಹ್ಲಿ 25ನೇ ಬಾರಿ 50 ರನ್ ಗಳಿಸಿದ ಸಾಧನೆ ಮಾಡಿದರು.
ಇಂಗ್ಲೆಂಡ್ ಪರ ಸ್ಪಿನ್ನರ್ ಗಳಾದ ಜಾಕ್ ಲೀಚ್ ಮತ್ತು ಮೊಯಿನ್ ಅಲಿ ತಲಾ 4 ವಿಕೆಟ್ ಕಿತ್ತರು.