ಬಿಟ್ ಕಾಯಿನ್ ಕುರಿತು ಆಸಕ್ತಿ ಈಗ ಹೆಚ್ಚು. ಅದನ್ನು ಕ್ರಿಪ್ಟೋ ಕರೆನ್ಸಿ ಎಂದೂ ಕರೆಯುತ್ತಾರೆ. ಇದು ಮೊದಲು ಅಸ್ತಿತ್ವಕ್ಕೆ ಬಂದಿದ್ದು 2008ರಲ್ಲಿ. ಹೆಚ್ಚು ಚಾಲ್ತಿಗೆ ಬಂದಿದ್ದು 2011ರಲ್ಲಿ. ಇದನ್ನು ಆರಂಭಿಸಿದವರು ಯಾರು ಮುಂತಾದ ಹೆಚ್ಚು ವಿವರ ಇಲ್ಲ. ಭಾರತದಲ್ಲಿ ಇದಕ್ಕೆ ಮಾನ್ಯತೆ ಇಲ್ಲ, ನಿಷೇಧವೂ ಇಲ್ಲ. ಅಮೇರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಈ ಬಿಟ್ ಕಾಯಿನ್ಗೆ ಮಾನ್ಯತೆ ಇದೆ. ಇತ್ತೀಚೆಗೆ ಟೆಸ್ಲಾ ಕಂಪನಿಯ ಒಡೆಯ, ಜಗತ್ತಿನ ಅತಿ ದೊಡ್ಡ ಶ್ರೀಮಂತ ಅಲಾನ್ ಮಸ್ಕ್ ತನ್ನ ಒಡೆತನದ ಕಂಪನಿಗಳ ಬಂಡವಾಳದಲ್ಲಿ ಒಂದೂವರೆ ಶತಕೋಟಿ ಡಾಲರ್ ಗಳನ್ನು ಈ ಬಿಟ್ ಕಾಯಿನ್ಗಳಲ್ಲಿ ಹೂಡಿಕೆ ಮಾಡಿದ. ಜೊತೆಗೇ ಮುಂದಿನ ದಿನಗಳಲ್ಲಿ ಆತನ ಸಂಸ್ಥೆ ತಯಾರಿಸುವ ವಿದ್ಯುತ್ ಚಾಲಿತ ಕಾರುಗಳನ್ನು ಬಿಟ್ ಕಾಯಿನ್ ಮೂಲಕ ಖರೀದಿಸಬಹುದು ಎಂದೂ ಆತ ಹೇಳಿದ್ದು ಬಹಳ ದೊಡ್ಡ ಸಂಚಲನ ಸೃಷ್ಟಿಸಿದೆ.
ಈ ವರೆಗೆ ಬಿಟ್ ಕಾಯಿನ್ ಹೆಚ್ಚಾಗಿ ‘ಶೇರ್’ನಂತೆ ಕೊಳ್ಳುವ ಮತ್ತು ಮಾರುವ ಸಾಮಗ್ರಿ ಆಗಿತ್ತು. ಆದರೆ ಕಳ್ಳ ಜಾಲ ಅಥವಾ ಡಾರ್ಕ್ ವೆಬ್ ಮೂಲಕ ಮಾದಕ ವಸ್ತು ಮತ್ತು ಅಕ್ರಮ ಶಸ್ತ್ರಾಸ್ತ್ರ ಖರೀದಿಯು ಇದೇ ಕರೆನ್ಸಿ ಮೂಲಕ ನಡೆಯುತ್ತಿತ್ತು ಎಂದು ಹೇಳುತ್ತಾರೆ. ನಾವು ಒಂದು ಬ್ಯಾಂಕ್ನಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದರೆ ಯಾರು, ಯಾರಿಗೆ, ಎಷ್ಟು ಹಣ ಕೊಟ್ಟರು ಎಂದು ತಿಳಿಯುತ್ತದೆ. ಆದರೆ ಬಿಟ್ ಕಾಯಿನ್ ವಿಚಾರದಲ್ಲಿ ಹಾಗೆ ವ್ಯವಹಾರಕ್ಕೆ ಸಂಬಂಧಿಸಿದವರ ವಿವರ ಸಿಗುವುದಿಲ್ಲ. ಜೊತೆಗೆ ಇದು ಅಂತರ್ರಾಷ್ಟ್ರೀಯ ಮಾನ್ಯತೆ ಪಡೆದ ಕರೆನ್ಸಿಯಾದ ಕಾರಣ ವಿದೇಶಿ ವಿನಿಮಯ ಆದಿ ಗೋಜು ಇಲ್ಲ.
ನಮ್ಮ ದೇಶದಲ್ಲಿಯೂ ಹಲವಾರು ವರ್ಷಗಳಿಂದ ಬಿಟ್ ಕಾಯಿನ್ಗಳ ವ್ಯವಹಾರ ನಡೆಯುತ್ತಿದೆ. ಹೆಚ್ಚಾಗಿ ಇದು ಶೇರು ಮಾರುಕಟ್ಟೆಯ ಮಾದರಿಯಲ್ಲಿ ನಡೆಯುತ್ತದೆ. ಶೇರು ಮಾರುಕಟ್ಟೆ ದಿನದ ನಿಗದಿತ ಅವಧಿಯಲ್ಲಿ ಮಾತ್ರ ವ್ಯವಹಾರ ನಡೆಸುತ್ತದೆ. ಈ ಕ್ರಿಪ್ಟೋ ಕರೆನ್ಸಿಯ ವ್ಯವಹಾರ ದಿನದ 24 ತಾಸೂ ನಡೆಯುತ್ತಾ ಇರುತ್ತದೆ. ಈ ಕರೆನ್ಸಿ ನಮ್ಮ ನೋಟ್ಗಳಂತಲ್ಲ. ಅದು ಒಂದು ರೀತಿಯ ಕಂಪ್ಯೂಟರ್ ಫೈಲ್. ಅದಕ್ಕೆ ಪ್ರತಿ ಗ್ರಾಹಕ ತನ್ನದೇ ಕೀ ಪಡೆದಿರುತ್ತಾನೆ. ಆ ಕೀ ಮರೆತರೆ, ಬ್ಯಾಂಕಿನ ವ್ಯವಹಾರಗಳ ವಿಷಯದಲ್ಲಿ ಬ್ಯಾಂಕಿಗೆ ಅರ್ಜಿ ಸಲ್ಲಿಸಿ ಪಾಸ್ವರ್ಡ್ ಮರಳಿ ಪಡೆಯಬಹುದು, ಇಲ್ಲಿ ಹಾಗಲ್ಲ. ಒಮ್ಮೆ ಮರೆತರೆ ಎಲ್ಲ ಮುಗಿಯಿತು. ಈ ಕರೆನ್ಸಿ ಫೈಲನ್ನು ತಯಾರಿಸುವುದು ಕಂಪ್ಯೂಟರ್. ಅದನ್ನು ಡಿಜಿಟಲ್ ಕರೆನ್ಸಿ ಎಂದೂ ಹೇಳುತ್ತಾರೆ. ಒಟ್ಟಾರೆ ಜಗತ್ತಿನಲ್ಲಿ 21 ದಶಲಕ್ಷ ಬಿಟ್ ಕಾಯಿನ್ ಪಡೆಯಬಹುದು. ಈಗಾಗಲೇ 18 ದಶಲಕ್ಷ ಬಿಟ್ ಕಾಯಿನ್ಗಳು ದೊರೆತಿವೆ. ದೇಶಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕರೆನ್ಸಿ ಹೆಚ್ಚು ಮುದ್ರಿಸಬಹುದು, ಆದರೆ ಇಲ್ಲಿ ಹಾಗಲ್ಲ. ಮೊದಲು ಬಿಟ್ ಕಾಯಿನ್ ಚಾಲನೆಗೆ ಬಂದಾಗ ಅದರ ಮೌಲ್ಯ ಏನೇನೂ ಇರಲಿಲ್ಲ. ಈಗ ಒಂದು ಬಿಟ್ ಕಾಯಿನ್ ಮೌಲ್ಯ ಹಲವು ಲಕ್ಷ ಡಾಲರ್ ಗಳು. ಈ ಕಾಯಿನ್ಗಳು ಸೀಮಿತ ಸಂಖ್ಯೆಯಲ್ಲಿ ಇರುವುದರಿಂದ ಬೆಲೆ ಏರುತ್ತಾ ಇದೆ.
ನಮ್ಮ ದೇಶದಲ್ಲಿ ಈ ಕಾಯಿನ್ ಕುರಿತು ಇನ್ನೂ ಅನುಮಾನ ಇದೆ. ಕೇಂದ್ರ ಹಣಕಾಸು ಇಲಾಖೆ ಈ ಕುರಿತು ಸಮಗ್ರ ಮಸೂದೆ ತರುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಆದರೂ ಹಲವು ವರ್ಷಗಳಿಂದ ನಮ್ಮಲ್ಲಿ ಬಿಟ್ ಕಾಯಿನ್ ವ್ಯವಹಾರ ನಡೆಯುತ್ತಾ ಇದೆ. ಹೆಚ್ಚಾಗಿ ಇದರಲ್ಲಿ ಹಣ ಹೂಡುವವರು ಅದನ್ನು ಶೇರುಗಳಂತೆ ಬಳಸುತ್ತಾರೆ. ಹಣ ಇದ್ದಾಗ ಕೊಳ್ಳುವ, ಅಗತ್ಯ ಬಿದ್ದಾಗ ಮಾರುವ ಮೂಲಕ ಲಾಭ ಮಾಡಿಕೊಳ್ಳುವುದು ಉದ್ದೇಶ. ಮುಂದಿನ ದಿನಗಳಲ್ಲಿ ಇದನ್ನು ಬೇರೆ ವಸ್ತುಗಳನ್ನು ಕೊಳ್ಳಲು ಕೂಡ ಬಳಸಬಹುದು ಎಂಬ ಅಭಿಪ್ರಾಯ ಇದೆ. ಈ ವ್ಯವಹಾರದಲ್ಲಿ ಈಗ ಭಾರತದಲ್ಲಿ ಹೂಡಿಕೆ ಮಾಡಿರುವ ಜನರ ಸಂಖ್ಯೆ ನಾಲ್ಕರಿಂದ ಆರು ಕೋಟಿ. ಈಗ ಇದರಲ್ಲಿ ತೊಡಗಿರುವ ಎಲ್ಲರೂ 25ರಿಂದ 30 ವರ್ಷ ವಯಸ್ಸಿನವರು. ಈ ನಡುವೆ ಭಾರತೀಯ ರಿಸರ್ವ ಬ್ಯಾಂಕ್ ತನ್ನದೇ ಕ್ರಿಪ್ಟೋ ಕರೆನ್ಸಿ ಜಾರಿಗೆ ತರುವ ಕುರಿತು ಚಿಂತನೆ ನಡೆಸಿದೆ.
ಮುಂದಿನ ದಿನಗಳಲ್ಲಿ ಈ ಕ್ರಿಪ್ಟೋ ಕರೆನ್ಸಿ ಯಾವ ಸ್ವರೂಪ ಪಡೆಯಲಿದೆ ಎಂದು ಹೇಳುವುದು ಕಷ್ಟ. ಆದರೆ ಈಗ ಅದರಲ್ಲಿ ಹೂಡಿಕೆ ಮಾಡಿರುವ ಬಹುತೇಕ ಜನರು ಕರೆನ್ಸಿ ಮೌಲ್ಯ ವೃದ್ಧಿ ಆಗುವ ಮೂಲಕ ಲಾಭ ಪಡೆಯಬಹುದು ಎಂದು ಚಿಂತಿಸುತ್ತಾರೆ. ಹತ್ತು ವರ್ಷದ ಹಿಂದೆ ಶೂನ್ಯ ಮೌಲ್ಯ ಇದ್ದ ಕಾಯಿನ್ ಇಂದು ಹಲವು ಲಕ್ಷ ಡಾಲರ್ ಮೌಲ್ಯ ಹೊಂದಿದೆ ಎನ್ನುವುದೇ ಇಲ್ಲಿನ ಬಹು ಮುಖ್ಯ ಆಕರ್ಷಣೆ. ‘ಇದನ್ನು ಜೂಜಿನ ಸಾಧನ ಆಗಿ ಮಾತ್ರ ಬಳಸಬಹುದು’ ಎಂದು ಜಗತ್ತಿನ ಪ್ರಸಿದ್ಧ ಹೂಡಿಕೆದಾರ ವಾರೆನ್ ಬುಫೆಟ್ ಹೇಳಿದ್ದಾನೆ.
ಇದು ಡಿಜಿಟಲ್ ಕರೆನ್ಸಿ ಆದುದರಿಂದ ನಾಳೆ ಏನು ಬೇಕಾದರೂ ಆಗಬಹುದು. ತಮ್ಮ ಕೀ ಅಥವಾ ಪಾಸ್ವರ್ಡ ಮರೆತ ಜನ ಎಂದಿಗೂ ಮತ್ತೆ ತಮ್ಮದೇ ಕರೆನ್ಸಿ ಪಡೆಯುವುದು ಸಾಧ್ಯ ಇಲ್ಲ. ಆದರೂ ಉದ್ಯಮ ಸಂಸ್ಥೆಗಳು ತಮ್ಮ ಬಂಡವಾಳದಲ್ಲಿ ಒಂದು ಪಾಲನ್ನು ಈ ಕರೆನ್ಸಿಯಲ್ಲಿ ತೊಡಗಿಸಲು ಮುಂದಾಗಿರುವುದು ಇದರ ಭವಿಷ್ಯದ ಬಗ್ಗೆ ಹೊಸ ಆಸೆ ಮೂಡಿಸಿದೆ. ಇದರಲ್ಲಿ ಹೂಡಿಕೆ ಮಾಡುವುದು ಕೂಡ ಸುಲಭ. ಕೇವಲ ನೂರು ರೂಪಾಯಿ ಬಂಡವಾಳ ಹೂಡಿ ವ್ಯವಹಾರ ಆರಂಭಿಸಬಹುದು. ನಿಮಗೆ ಈ ಕ್ರಿಪ್ಟೋ ಕರೆನ್ಸಿ ಒದಗಿಸುವ ಹಲವಾರು ಸಂಸ್ಥೆಗಳು ನಮ್ಮ ದೇಶದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿವೆ. ಗ್ರಾಹಕರ ವಿಶ್ವಾಸಾರ್ಹತೆ ಖಚಿತ ಮಾಡಿಕೊಂಡು ಹೂಡಿಕೆ ಸ್ವೀಕರಿಸಲಾಗುವುದು. ಮುಂದೊಂದು ದಿನ ಇದರಿಂದ ಲಾಭ ಪಡೆಯುವುದು ಸಾಧ್ಯವೋ ಅಥವಾ ಇದೂ ನೀರ್ಗುಳ್ಳೆಯಂತೆ ಉಬ್ಬಿ ಒಂದು ದಿನ ಒಡೆದು ಹೋಗಲಿದೆಯೋ ಎಂಬುದು ಈಗಲೇ ಹೇಳುವುದು ಸಾಧ್ಯ ಇಲ್ಲ.
ಭಾರತದಲ್ಲಿ ಈ ಕರೆನ್ಸಿ ವ್ಯವಹಾರಕ್ಕೆ ಸದ್ಯಕ್ಕೆ ಅಡ್ಡಿ ಇಲ್ಲ. ಈ ಹೂಡಿಕೆಯಲ್ಲಿ ಈ ವರೆಗೆ ಲಾಭ ಇದೆ ಎಂದು ತಿಳಿದು ಮನಸೋ ಇಚ್ಛೆ ಹೂಡಿಕೆ ಮಾಡುವವರಿಗೆ ಒಂದು ಎಚ್ಚರಿಕೆ ಮಾತು. ನಿಮ್ಮ ನಿಮ್ಮ ಆರ್ಥಿಕ ಸಲಹೆಗಾರರನ್ನು ಕಂಡು ಅವರೊಡನೆ ಚರ್ಚಿಸಿ, ಆನಂತರವಷ್ಟೇ ಈ ವ್ಯವಹಾರದಲ್ಲಿ ತೊಡಗಬೇಕು. ಶೇರು ಮಾರುಕಟ್ಟೆ ವ್ಯವಹಾರ ನಂಬಿ ಹೂಡಿಕೆ ಮಾಡಿ ಅಲ್ಲಿ ಏನಾದರೂ ಎಡವಟ್ಟಾದರೆ ಸರಿಪಡಿಸಲು ಅಲ್ಲೊಂದು ನಿಯಂತ್ರಣ ಮಂಡಳಿ ಇದೆ. ಕ್ರಿಪ್ಟೊ ಕರೆನ್ಸಿಗೆ ಅಂಥ ಯಾವ ವ್ಯವಸ್ಥೆಯೂ ಇಲ್ಲ. ಇದು ಯಾರ ಆಧೀನದಲ್ಲಿ ಇದೆ, ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಕೂಡ ಖಚಿತವಾಗಿ ಹೇಳಲು ಸಾಧ್ಯ ಇಲ್ಲ. ಆದ್ದರಿಂದಲೇ ಕೇವಲ ಲಾಭದ ಆಸೆಯಿಂದ ಹೂಡಿಕೆ ಮಾಡುವವರನ್ನು ವಂಚಿಸುವ ದೊಡ್ಡ ಪಡೆಗಳು ಹೊಂಚು ಹಾಕಿ ಕುಳಿತಿರುತ್ತವೆ ಎನ್ನುವುದನ್ನು ಸಹ ಮರೆಯಬಾರದು.