ಚೆನ್ನೈ, ಫೆ 16- ಭಾರತದ ಬಲಿಷ್ಠ ಸ್ಪಿನ್ ಕೋಟೆಯನ್ನು ಭೇದಿಸುವಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ವಿಫಲವಾಗಿದ್ದು, ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ವಿರಾಟ್ ಪಡೆ 1-1 ರಿಂದ ಸಮಬಲ ಸಾಧಿಸಿದೆ.
ನಿರೀಕ್ಷೆಯಂತೆ ಮಂಗಳವಾರ ಭಾರತ ಭಾರಿ ಗೆಲುವು ದಾಖಲಿಸಿತು. ನಾಲ್ಕನೇ ದಿನ 3 ವಿಕೆಟ್ ಗೆ 53 ರನ್ ಗಳಿಂದ ಆಟ ಮುಂದುವರಿಸಿದ ಇಂಗ್ಲೆಂಡ್, 164 ರನ್ ಗಳಿಗೆ ಸರ್ವಪತನ ಕಂಡಿತು. ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಟೀಮ್ ಇಂಡಿಯಾ ಎರಡನೇ ಟೆಸ್ಟ್ ಪಂದ್ಯ ಗೆದ್ದು ಸರಣಿ ಸಮನಾಗಿಸಿದೆ. ಸರಣಿಯ ಮುಂದಿನ ಪಂದ್ಯ ಅಹದಾಬಾದ್ ನಲ್ಲಿ 24 ರಂದು ನಡೆಯಲಿದೆ.
ಪದಾರ್ಪಣೆ ಪಂದ್ಯವನ್ನು ಆಡಿದ ಅಕ್ಷರ ಪಟೇಲ ಎರಡನೇ ಇನ್ನಿಂಗ್ಸ್ ನಲ್ಲಿ 60 ರನ್ ನೀಡಿ 5 ವಿಕೆಟ್ ಕಬಳಿಸಿದರು. ಅಶ್ವಿನ್ ಮೂರು ಹಾಗೂ ಕುಲದೀಪ ಯಾದವ ಎರಡು ವಿಕೆಟ್ ಪಡೆದರು.
ಮಂಗಳವಾರ ಆಟ ಆರಂಭಿಸಿದ ಇಂಗ್ಲೆಂಢ್ ತಂಡಕ್ಕೆ ಅಶ್ವಿನ್ ಆಘಾತ ನೀಡಿದರು. ಐದನೇ ವಿಕೆಟ್ ಗೆ ಬೆನ್ ಸ್ಟೋಕ್ಸ್ ಹಾಗೂ ಜೋ ರೂಟ್ ತಂಡವನ್ನು ಮುನ್ನಡೆಸುವ ಭರವಸೆ ಮೂಡಿಸಿದರು. ಆದರೆ ಫಲ ಲಭಿಸಲಿಲ್ಲ. ಬೆನ್ ಸ್ಟೋಕ್ಸ್ 51 ಎಸೆತಗಳನ್ನು ಎದುರಿಸಿ ನೆಲಕಚ್ಚಿ ಬ್ಯಾಟ್ ಮಾಡುವ ವೇಳೆ, ಅಶ್ವಿನ ಎಸೆತವನ್ನು ತಪ್ಪಾಗಿ ಗ್ರಹಿಸಿ ಕೊಹ್ಲಿಗೆ ಕ್ಯಾಚ್ ನೀಡಿದರು.
ನಂತರ ಬಂದ ಒಲಿ ಪೋಪ್ (12) ಹಾಗೂ ಬೆನ್ ಫೋಕ್ಸ್ ಜವಾಬ್ದಾರಿ ಮರೆತರು. ಒಂದು ತುದಿಯಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸುತ್ತಿದ್ದ ರೂಟ್ (33) ಅವರನ್ನು ಅಕ್ಷರ ಪಟೇಲ ಪೆವಿಲಿಯನ್ ಹಾದಿ ತೋರಿಸಿದರು. ಸರಿಯಾದ ಸ್ಥಳದಲ್ಲಿ ಚೆಂಡನ್ನು ಎಸೆದ ಅಕ್ಷರ್ ಅಬ್ಬರಿಸಿದರು. ಕೆಳ ಕ್ರಮಾಂಕದಲ್ಲಿ ಮೋಯಿನ್ ಅಲಿ 5 ಸಿಕ್ಸರ್ ಹಾಗೂ ಮೂರು ಬೌಂಡರಿ ಸಿಡಿಸಿ ಸೋಲಿನಲ್ಲಿ ಮಿಂಚಿದರು.
ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನ್ನಿಂಗ್ಸ 329, ಎರಡನೇ ಇನ್ನಿಂಗ್ಸ್ 286
ಇಂಗ್ಲೆಂಡ್ 134, ಎರಡನೇ ಇನ್ನಿಂಗ್ಸ್ 164
ಪಂದ್ಯ ಶ್ರೇಷ್ಠ: ಆರ್. ಅಶ್ವಿನ್