ಬೆಂಗಳೂರು: ಫೆ, 16 – ಹಿಂದುಳಿದ ವರ್ಗಗಳ ಜಾತಿಪಟ್ಟಿಗೆ 2 ಎ ಪ್ರವರ್ಗದಲ್ಲಿ ಹೊಸದಾಗಿ ಇತರೆ ಯಾವುದೇ ಮುಂದುವರೆದ ಜಾತಿಯನ್ನು ಸೇರ್ಪಡೆ ಮಾಡಿದರೆ ನೇಕಾರ ಸಮುದಾಯ ಮೀಸಲಾತಿಯಿಂದ ವಂಚಿತವಾಗಿ, ಅಸಮಾನತೆ ಹೆಚ್ಚಾಗಿ ಸಾಮಾಜಿಕ ನ್ಯಾಯ ಎಂಬ ಪರಿಕಲ್ಪನೆಗೆ ಪೆಟ್ಟು ಬೀಳಲಿದೆ ಎಂದು ನೇಕಾರ ರಾಜ್ಯಾಧ್ಯಕ್ಷ ಎಣ್ಣೆಗೆರೆ ಆರ್. ವೆಂಕಟರಾಮಯ್ಯ ಆತಂಕ ತೋಡಿಕೊಂಡಿದ್ದಾರೆ.
ಈ ಕುರಿತು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಯವರಿಗೆ ಪತ್ರ ಬರೆದು ಇತರೆ ಬಲಿಷ್ಟ ಸಮುದಾಯ ಜನಾಂಗವನ್ನೂ ಸೇರ್ಪಡೆ ಮಾಡಿದರೆ ನೇಕಾರ ಜನಾಂಗಕ್ಕೆ ಮೀಸಲಾತಿ ಎಂಬುದು ಗಗನ ಕುಸಮವಾಗಿ ಸಮುದಾಯ ಪೂರ್ಣ ವಂಚಿತವಾಗಲಿದೆ ಎಂದು ಪತ್ರದ ಮೂಲಕ ವಿವರಿಸಿದ್ದಾರೆ.
ಮೀಸಲಾತಿಯನ್ನು ಉದ್ಯೋಗ ಮತ್ತು ಶಿಕ್ಷಣಕ್ಕೆ ಮೀಸಲಿರಿಸಲಾಗಿದೆ. ಈ ಮೀಸಲಾತಿಯು ಜನಸಂಖ್ಯೆಗೆ ಅನುಗುಣವಾಗಿ ನಿಗದಿಯಾಗಿರುವುದಿಲ್ಲ.ಹಾಗು ಈಗಾಗಲೇ 102 ಜಾತಿಗಳಿಗೆ ಮೀಸಲಾತಿಯ ಹಕ್ಕು ಹಾಗೂ ಸೌಲಭ್ಯಗಳು ಸರಿಯಾಗಿ ಸಿಗದೆ ತೊಂದರೆಯಾಗಿದೆ. ಹಾಗೂ ಈಗಾಗಲೇ 3ಎ / 3ಬಿ ಮೀಸಲಾತಿ ಪಟ್ಟಿಯಲ್ಲಿರುವ ಕೆಲವು ಜಾತಿಗಳು ನಮ್ಮ ಜನಾಂಗವನ್ನು 2ಎ ಮೀಸಲಾತಿ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯ ಮಾಡುತ್ತಿರುವ ವಿಷಯ ಸಂಘದ ಗಮನಕ್ಕೆ ಬಂದಿದ್ದು , ಅಲ್ಲದೇ ಪ್ರವರ್ಗ 2 ಎ ರಲ್ಲಿನ ಸಂಖ್ಯಾ ಬಾಹುಳ್ಯವುಳ್ಳ ಮುಂದುವರೆದ ಜಾತಿಗಳೊಂದಿಗೆ ಸ್ಪರ್ಧಿಸುವುದೂ ಸಹ ಕಷ್ಟವಾಗಲಿದೆ ಎಂದು ಆತಂಕ ತೋಡಿಕೊಂಡಿದ್ದಾರೆ.
ಈ ಜನಾಂಗದವರು ಶೇಕಡ 15 ರ ಮೀಸಲಾತಿಯಲ್ಲಿ ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಪ್ರಯೋಜನ ಪಡೆಯುವಲ್ಲಿ ಕಷ್ಟವಾಗಿ ಸಮಾನತೆ ಪಡೆಯುವಲ್ಲಿ ವಿಫಲವಾಗುತ್ತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ನೇಕಾರ ಸಮುದಾಯಗಳನ್ನೊಳಗೊಂಡ ಜನಾಂಗ ಸಂಕಷ್ಟವನ್ನು ಅನುಭವಿಸುತ್ತಿರುವಾಗಲೇ ಸರ್ಕಾರವು ಪ್ರವರ್ಗ 2 ಎ ಸಮೂಹಕ್ಕೆ ಬಲಿಷ್ಟ ಸಂಖ್ಯೆಯಲ್ಲಿರುವ ಇತರೆ ಯಾವುದೇ ಜನಾಂಗವನ್ನು ಸೇರ್ಪಡೆ ಮಾಡುವುದರ ಬಗ್ಗೆ ಆಯೋಗದ ವರದಿಯನ್ನು ಕೇಳಿರುವುದು ಮತ್ತಷ್ಟು ಆತಂಕ ಅಸಮಾನತೆ ಕಾರಣವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಈಗಿರುವ ವ್ಯವಸ್ಥೆಯಲ್ಲಿಯೇ ನಮ್ಮ ನೇಕಾರ ಸಮುದಾಯಗಳನ್ನೊಳಗೊಂಡ ಜನಾಂಗ ಶೈಕ್ಷಣಿಕ ಹಾಗೂ ಉದ್ಯೋಗಗಳನ್ನು ಪಡೆಯುವಲ್ಲಿ, ಪೈಪೋಟಿ ನಡೆಸುವಲ್ಲಿ ವೈಫಲ್ಯ, ಹಿನ್ನಡೆ ಅನುಭವಿಸುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಇತರೆ ಬಲಿಷ್ಟ ಸಮುದಾಯ ಜನಾಂಗವನ್ನೂ ಸೇರ್ಪಡೆ ಮಾಡಿದರೆ ಮೀಸಲಾತಿಯಿಂದ ನೇಕಾರ ಸಮುದಾಯ ಪೂರ್ಣ ವಂಚಿತವಾಗಲಿದೆ.
ಅದೂ ಅಲ್ಲದೇ ಹೊಸದಾಗಿ ಯಾವುದೇ ಜಾತಿಯನ್ನು ಹೀಗೆ ಸೇರ್ಪಡೆ ಮಾಡುವುದರಿಂದ ಆ ಪ್ರವರ್ಗಕ್ಕೆ ಹೆಚ್ಚಿನ ಜನಸಂಖ್ಯಾ ಪ್ರಮಾಣವಾಗುತ್ತದೆಯೇ ವಿನಹ ಹಾಲಿ ಮೀಸಲು ಪ್ರಮಾಣ ಹೆಚ್ಚಳವಾಗುವುದಿಲ್ಲ. ಇದರಿಂದಾಗಿ ಈ ಹಿಂದಿನ ಆಯೋಗವು ನಿಗದಿಮಾಡಿದ ಮೀಸಲಾತಿಗಳ ಮಾನದಂಡಗಳಲ್ಲಿ ಅಸಮತೋಲನ ಉಂಟಾಗಲಿದೆ . ಸಾಮಾಜಿಕ ನ್ಯಾಯ ಸೂತ್ರದಡಿ ಮತ್ತು ಅಸಮತೋಲನದ ಅಪಾಯ ತಪ್ಪಿಸುವ ದೃಷ್ಟಿಯಿಂದ 2 ಎ ಪ್ರವರ್ಗಕ್ಕೆ ಹೊಸದಾಗಿ ಯಾವುದೇ ಜಾತಿಯನ್ನು ವಿಲೀನಗೊಳಿಸಬಾರದು, ಸೇರಿಸಬಾರದು ಮತ್ತು ಮುಂದೆ ಆಗಲಿರುವ ಅನ್ಯಾಯ ತಿಳಿದು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದೂ ಅವರು ಆಗ್ರಹಪಡಿಸಿದ್ದಾರೆ.