ಬೆಳಗಾವಿ: 17- ತಮಗೆ ಕಾಂಗ್ರೆಸ್ ಸೇರಲು ಆಹ್ವಾನ ಬಂದಿದ್ದು, ತಮ್ಮ ಅಭಿಮಾನಿಗಳ, ಬೆಂಬಲಿಗರ ಹಾಗು ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಕೇಳಿ ನಿರ್ಧಾರ ತೆಗೆದುಕೊಳ್ಳುವದಾಗಿ ಜೆಡಿಎಸ್ ಮುಖಂಡ ಅಶೋಕ ಪೂಜಾರಿ ತಿಳಿಸಿದರು.
ಬೆಳಗಾವಿಯಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ ಅವರು ತಮ್ಮ ಮನೆಗೆ ಬಂದು ನನ್ನನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಆದರೆ ಎಚ್ ಡಿ ದೇವೇಗೌಡ ತಮ್ಮ ರಾಜಕೀಯ ಗಾಡಫಾದರ್, ಕುಮಾರಸ್ವಾಮಿ ಅವರೂ ತಮ್ಮ ನಾಯಕರು. ಅವರ ಮೇಲೆ ತಮಗೆ ವಿಶೇಷ ಗೌರವ, ಅಭಿಮಾನವಿದೆ. ಇಲ್ಲಿ ಏನೇ ಬೆಳವಣಿಗೆ ನಡೆದರೂ ಕೂಡ ಅವರ ಗಮನಕ್ಕೆ ತಂದು ಅವರ ಜೊತೆ ಮಾತನಾಡಿ, ಹಿರಿಯ ಮುಖಂಡರು, ಕಾರ್ಯಕರ್ತರ ಸಲಹೆ ಸೂಚನೆ ಮೇರೆಗೆ ನನ್ನ ಮುಂದಿನ ರಾಜಕೀಯ ನಡೆ ನಿರ್ಧಸುವದಾಗಿ ಅವರು ತಿಳಿಸಿದರು.
ಜಾರಕಿಹೊಳಿ ಅವರೊಂದಿಗಿನ ಮಾತುಕತೆಯ ವಿವರ ನೀಡಿದ ಅವರು, ಜಾರಕಿಹೊಳಿ ತಮ್ಮನ್ನು ಮಾತ್ರವಲ್ಲದೇ ಗೋಕಾಕ ತಾಲೂಕಿನ ವೀರಶೈವ ಮುಖಂಡರು, ಸೇರಿದಂತೆ ಎಲ್ಲರನ್ನು ಪಕ್ಷಕ್ಕೆ ಆಹ್ವಾನಿಸುತ್ತಿದ್ದೇವೆ. ಬನ್ನಿ ಒಳ್ಳೆಯ ಅವಕಾಶವಿದೆಯೆಂದು ಹೇಳಿದ್ದಾರೆಂದು ತಿಳಿಸಿದರು.
ಗೋಕಾಕ ವ್ಯವಸ್ಥೆ ವಿರುದ್ಧ ನಡೆದಿರುವ ನಿಮ್ಮ ಹೋರಾಟ ನಮ್ಮ ಹೋರಾಟ ಒಂದೇ ಆಗಿದೆ. ಹೀಗಾಗಿ ನಮ್ಮ ನಿಮ್ಮ ವಿಚಾರಧಾರೆ ಒಂದೇ ಆಗಿರುವುದರಿಂದ ಎಲ್ಲರೂ ಕೂಡಿ ಹೊಸ ಅಧ್ಯಾಯ ಆರಂಭಿಸೋಣ ಎಂದು ಜಾರಕಿಹೊಳಿ ಹೇಳಿದ್ದಾರೆ ಎಂದು ಪೂಜಾರಿ ಹೇಳಿದರು.
ಆದರೆ ಕಳೆದ ನಾಲ್ಕು ಚುನಾವಣೆಗಳಲ್ಲಿ ತಮ್ಮ ಪರವಾಗಿ ದುಡಿದಿರುವ ಮುಖಂಡರ, ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ತಮ್ಮ ಮುಂದಿನ ರಾಜಕೀಯ ನಡೆಯಾಗಿರುತ್ತದೆ ಎಂದು ಅವರಿಗೆ ತಿಳಿಸಿದ್ದೇನೆ ಎಂದು ಅಶೋಕ ಪೂಜಾರಿ ಹೇಳಿದರು.
ಕಾಂಗ್ರೆಸ್ನಿಂದ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಸ್ಪರ್ಧಿಸುವಿರಾ ಎಂಬ ಪ್ರಶ್ನೆಗೆ, ತಾವು ಕಾಂಗ್ರೆಸ್ ನಲ್ಲಿಲ್ಲ, ಜೆಡಿಎಸ್ ನಲ್ಲಿದ್ದೇನೆ, ಕಾಂಗ್ರೆಸ್ ಟಿಕೆಟ್ ಕೊಡುವ ಪ್ರಶ್ನೆಯೇ ಇಲ್ಲ ಎಂದರು.