ಮಂಡ್ಯ: “ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಿತ್ರನಟ ಯಶ್ ತನ್ನ ಅಂತ್ಯಕ್ರಿಯೆಗೆ ಬರಬೇಕು” ಎಂದು ಪತ್ರ ಬರೆದಿಟ್ಟ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಮಂಡ್ಯದ ಕೋಡಿದೊಡ್ಡಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಮಂಡ್ಯದ ಪೆಟ್ರೋಲ್ ಬಂಕ್ ದಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ರಾಮಕೃಷ್ಣ ಆತ್ಮಹತ್ಯೆ ಮಾಡಿಕೊಂಡವರು. ಯಾಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುವದು ಅವರೊಂದಿಗೆ ಕೆಲಸ ಮಾಡುತ್ತಿರುವವರು ಮತ್ತು ಮನೆಯವರಿಗೂ ಗೊತ್ತಾಗಿಲ್ಲ.
ಪತ್ರದಲ್ಲಿ ತನ್ನ ಅಂತ್ಯಕ್ರಿಯೆಗೆ ಸಿದ್ದರಾಮಯ್ಯ ಹಾಗೂ ನಟ ಯಶ್ ಅವರು ಬರಬೇಕು ಎಂದು ಬರೆದಿದ್ದಾನೆ. ಅಲ್ಲದೇ ನಾನು ತಾಯಿಗೆ ತಕ್ಕ ಮಗನಾಗಲಿಲ್ಲ, ಅಣ್ಣನಿಗೆ ತಕ್ಕ ತಮ್ಮನಾಗಲಿಲ್ಲ, ಹುಡುಗಿಗೆ ತಕ್ಕ ಹುಡುಗನಾಗಲಿಲ್ಲ, ಸ್ನೇಹಿತರಿಗೂ ಒಳ್ಳೆಯ ಸ್ನೇಹಿತನಾಗಲಿಲ್ಲ. ಎಲ್ಲರೂ ನನ್ನನ್ನು ಕ್ಷಮಿಸಿಬಿಡಿ ಎಂದು ಬರೆದಿದ್ದಾನೆ.
ತಮ್ಮ ಅಭಿಮಾನಿಯ ಕೊನೆಯ ಆಸೆ ಈಡೇರಿಸಲು ಸಿದ್ದರಾಮಯ್ಯ ಅವರು ರಾಮಕೃಷ್ಣನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು ಎನ್ನಲಾಗಿದೆ.