ಬೆಂಗಳೂರು: ಫೆ 18 – ರಾಜಕೀಯ ಪಕ್ಷಗಳು ಜಾತಿ ಸಮಾವೇಶಗಳನ್ನು ಮಾಡುವುದು ತಪ್ಪಾಗುತ್ತದೆ. ಜಾತಿ ಸಮಾವೇಶಗಳನ್ನು ಮಾಡುವ ಬದಲು ವರ್ಗವಾರು ಸಮಾವೇಶಗಳನ್ನು ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ಸಲಹೆ ನೀಡಿದ್ದಾರೆ.
ನಗರದಲ್ಲಿ ಗುರುವಾರ ಕೆ.ಕೆ.ಗೆಸ್ಟ್ ಹೌಸ್ ಬಳಿ ಸಿದ್ದರಾಮಯ್ಯ ಹಿಂದ ಸಮಾವೇಶ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ವೀರಪ್ಪ ಮೊಯ್ಲಿ, ಅಹಿಂದ , ಹಿಂದುಳಿದ ದಲಿತರ ಸಂಘಟನೆ ಮಾಡಲು ಪಕ್ಷದಲ್ಲಿ ಆಯಾ ಘಟಕಗಳಿವೆ. ಪಕ್ಷದಲ್ಲಿರುವ ಘಟಕಗಳ ಮುಖಾಂತರ ಸಮಾವೇಶ ಸಂಘಟನೆ ಮಾಡುವುದರಲ್ಲಿ ತಪ್ಪಿಲ್ಲ. ಪ್ರತ್ಯೇಕ ಜಾತಿ ಸಮಾವೇಶಗಳು ಸರಿಯಲ್ಲ. ಇದೇ ಹಿಂದುಳಿದವರಲ್ಲೇ ಜಾತಿಗಳ ವಿಘಟನೆಯಾಗಲಿದೆ ಎಂದರು.
ಅಹಿಂದ ಸಂಘಟನೆಯಾಗಬಾರದು ಎಂಬುದು ನನ್ನ ಅಭಿಪ್ರಾಯವಲ್ಲ. ಆದರೆ ಯಾವುದೇ ಸಂಘಟನೆಗಳಾದರೂ ಪಕ್ಷದ ಚೌಕಟ್ಟಿನಲ್ಲಿಯೇ ಆಗುವುದು ಒಳ್ಳೆಯದು. ಈ ಹಿಂದಿನಿಂದಲೂ ದಲಿತ ಹಾಗೂ ಹಿಂದುಳಿದ ವರ್ಗಗಳನ್ನು ಮೇಲೆತ್ತಲು ಕಾಂಗ್ರೆಸ್ ಸಾಕಷ್ಟು ಯೋಜನೆಗಳನ್ನು ಕೊಟ್ಟಿದೆ. ಅವುಗಳ ಪ್ರಗತಿ ಪರಿಶೀಲನೆ ಅಗತ್ಯ ಎಂದರು.