ಬೆಂಗಳೂರು: 18- ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿ ಕುಗ್ಗಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಬಿಹಾರ ಚುನಾವಣೆಗೆ ಹಣ ನೀಡಿದ್ದಾರೆ. ಅಲ್ಲಿ ಬಿಜೆಪಿ ಸೋಲಿಸಲು ಆರ್ ಜೆ ಡಿ ಮತ್ತು ಕಾಂಗ್ರೆಸ್ಗೆ ಅವರು ಹಣ ಸಂದಾಯ ಮಾಡಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಜಯೇಂದ್ರ ಅವರ ಮಾರಿಷಸ್ ವಿಚಾರವನ್ನು ಬರೆದಿದ್ದೇನೆ. ವಿಜಯೇಂದ್ರ ಮಾರಿಷಸ್ ಗೆ ಯಾಕೆ ಹೋಗಿದ್ದರು. ಮಾರಿಷಸ್ ಗೆ ಯಾವ ವಿಮಾನದಲ್ಲಿ ಹೋಗಿದ್ದರು, ಆ ವಿಮಾನದ ನಂಬರ್ ಕೂಡ ಬರೆದಿದ್ದೇನೆ. ಎಷ್ಟು ಜನ ಹೋಗಿದ್ದರು ಎಂಬ ವಿಚಾರ ಕೂಡಾ ಬರೆದಿದ್ದೇನೆ. ಮಾಜಿ ಗೃಹ ಸಚಿವರೊಬ್ಬರ ಪಿಎ ಮೂಲಕ ಮಾರಿಷಸ್ ಗೆ ಏನೇನು ತೆಗೆದುಕೊಂಡು ಹೋಗಿದ್ದಾರೆ ಎನ್ನುವುದನ್ನು ಕೂಡಾ ಉಲ್ಲೇಖಿಸಿದ್ದೇನೆ. ಇದರ ತನಿಖೆ ಮಾಡಲು ಆಗ್ರಹಿಸಿದ್ದೇನೆ ಎಂದಿದ್ದಾರೆ.
ಬಿಜೆಪಿ ವರಿಷ್ಠರು ನೀಡಿದ್ದ ಶೋಕಾಸ್ ನೋಟಿಸ್ಗೆ 11 ಪುಟಗಳಷ್ಟು ಉತ್ತರ ನೀಡಿದ್ದೇನೆ. ಯಡಿಯೂರಪ್ಪ ಕುಟುಂಬದ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಿದ್ದೇನೆ. ಯಡಿಯೂರಪ್ಪ ಕುಟುಂಬ ಬಿಜೆಪಿ ಶಾಸಕರನ್ನು ಗೌರವಿಸುತ್ತಿಲ್ಲ. ಬಿಜೆಪಿ ಆಶಯಕ್ಕೆ ತಕ್ಕಂತೆ ಅಧಿಕಾರ ನಡೆಸುತ್ತಿಲ್ಲ. ಯಡಿಯೂರಪ್ಪ ಅವರ ಕುಟುಂಬದ ಬಗ್ಗೆ ತನಿಖೆಗೆ ಒತ್ತಾಯಿಸಿದ್ದೇನೆ ಎಂದು ಯತ್ನಾಳ ಹೇಳಿದರು.