ಗದಗ: 19- ಪ್ರೀತಿಯ ಹೆಸರಲ್ಲಿ ನಂಬಿಸಿದ್ದ ಮಹಿಳೆಯಿಂದ ತನಗೆ ಹುಟ್ಟಿದ್ದ ಒಂದು ವರುಷದ ಗಂಡು ಮಗುವನ್ನು ಕುತ್ತಿಗೆ ಹಿಸುಕಿ ಕೊಂದ ವ್ಯಕ್ತಿಗೆ ಗದಗ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
ರೋಣ ತಾಲೂಕಿನ ಹುಲ್ಲೂರು ಗ್ರಾಮದ ನಿವಾಸಿ ಪ್ರಶಾಂತಗೌಡ ಎಂಬವ ಪ್ರೀತಿಸಿ ಮಹಿಳೆಯೊಬ್ಬರನ್ನು ವಿವಾಹವಾಗಿದ್ದ. ಇಬ್ಬರ ಪ್ರೀತಿಗೆ ಮಗ ಹುಟ್ಟಿದ್ದ. ಆದರೆ ಪ್ರಶಾಂತನಿಗೆ ಪತ್ನಿ-ಮಗ ಬೇಕಿರಲಿಲ್ಲ. ದಂಪತಿಗಳ ಮಧ್ಯೆ ವಿರಸವಾಗಿ ಮಹಿಳೆ ವಿವಾಹ ವಿಚ್ಛೇದನಕ್ಕಾಗಿ ಕೋರ್ಟನಲ್ಲಿ ಅರ್ಜಿ ಸಲ್ಲಿಸಿ ಜೀವನಾಂಶಕ್ಕಾಗಿ ಕೋರಿಕೊಂಡಿದ್ದರು.
ಒಂದು ವರುಷದ ತನ್ನ ಸ್ವಂತ ಮಗನನ್ನು ಪ್ರಶಾಂತ ಗೌಡನು ಗಜೇಂದ್ರಗಡ ಪಟ್ಟಣದ ಕಾಲಕಾಲೇಶ್ವರ ಗುಡ್ಡಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದನಲ್ಲದೇ ಮೃತದೇಹವನ್ನು ಸುಟ್ಟು ಹಾಕಿದ್ದ.
ಈ ಬಗ್ಗೆ ಗಜೇಂದ್ರಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಇದೀಗ ನ್ಯಾಯಾಲಯ ತೀರ್ಪು ನೀಡಿದ್ದು, ಅಪರಾಧಿಗೆ ಮರಣದಂಡನೆ ವಿಧಿಸಿದೆ.