ಬೆಳಗಾವ: 20- ಮೂಢನಂಬಿಕೆ ವಿರುದ್ಧ ದೀನ ದಲಿತರಲ್ಲಿ ಜಾಗೃತಿ ಮೂಡಿಸಿ,
ಎಚ್ಚರಿಸುತ್ತಿರುವ ಕೆಪಿಸಿಸಿ ಕಾರ್ಯಧ್ಯಕ್ಷ, ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ನೇತೃತ್ವದ “, ಮಾನವ ಬಂಧುತ್ವ ವೇದಿಕೆ” ಯ ಸದಸ್ಯರೊಬ್ಬರು ತಾವು ಖರೀದಿಸಿದ ಹೊಸ ಕಾರಿನ ಚಾಲನೆಯನ್ನು ಸ್ಮಶಾನದಿಂದಲ್ಲೇ ಪ್ರಾರಂಭಿಸಿದ್ದಾರೆ.
ಸಂಕೇಶ್ವರ ಪಟ್ಟಣದ ವಿಕ್ರಮ ಕರನಿಂಗ ಎಂಬವರು ಶಾಸಕ ಸತೀಶ ಜಾರಕಿಹೊಳಿಯವರ ಅಭಿಮಾನಿ. ಅವರಂತೆ ಮೂಢನಂಬಿಕೆ ವಿರುದ್ಧ ಹೋರಾಟಗಳಲ್ಲಿ ಪಾಲ್ಗೊಂಡವರು. ಅವರೊಂದು ಕಾರನ್ನು ಕೊಂಡುಕೊಂಡು ಅದರ ಉದ್ಘಾಟನೆಯನ್ನು ಸದಾಶಿವನಗರದ ಸ್ಮಶಾನದಲ್ಲಿ ನೆರವೇರಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಸತೀಶ ಜಾರಕಿಹೊಳಿ, ಮೂಢನಂಬಿಕೆಯ ವಿರುದ್ಧ ಜನರಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿದ್ದೇವೆ. ಅದರ ಒಂದು ಭಾಗ ನೂತನ ಕಾರಿಗೆ ಇಂದು ಚಾಲನೆ ನೀಡಲಾಗುತ್ತಿದೆ ಎಂದರು.
ಸಂಕೇಶ್ವರದ ವಿಕ್ರಮ ಕರನಿಂಗ ಅವರು ಸಮಾಜದಲ್ಲಿ ಬದಲಾವಣೆ ಮಾಡಬೇಕು ಎಂಬ ಉದ್ದೇಶದಿಂದ ಹೆಜ್ಜೆ ಇಟ್ಟಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಹಿಂದೆಯೂ ಸಹ ಸ್ಮಶಾನದಲ್ಲಿ ಕಾರಿಗೆ ಚಾಲನೆ ನೀಡಲಾಗಿತ್ತು. ಇದರಿಂದ ಪ್ರೇರಣೆಗೊಂಡು ನೂತನ ಕಾರಿಗೆ ರುದ್ರಭೂಮಿಯಲ್ಲಿ ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ ಹಂತ ಹಂತವಾಗಿ ಬದಲಾವಣೆ ಆಗುತ್ತಿದೆ ಎಂದು ತಿಳಿಸಿದರು.
ಕಾರಿನ ಮಾಲೀಕ ವಿಕ್ರ ಕರನಿಂಗ ಮಾತನಾಡಿ, ಶಾಸಕ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಮೂಢನಂಬಿಕೆಯ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸುತ್ತಿದ್ದೇವೆ. ಅದೇ ರೀತಿ ಕಾರಿಗೆ ಚಾಲನೆ ನೀಡುವ ಮೂಲಕ ಸಮಾಜದಲ್ಲಿ ಬದಲಾವಣೆಗೆ ಪ್ರಯತ್ನ ಪಡಲಾಗುತ್ತಿದೆ ಎಂದು ತಿಳಿಸಿದರು.
ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ನವೀನ ಗಂಗರೆಡ್ಡಿ, ನಾಗರಾಜ ಕರಣಿಂಗ್, ರಾಜು ನಡಮನಿ, ಪ್ರಶಾಂತ್ ಬಾಡಕರ, ಶಿವರಾಜ ನೂಲಕರ, ಸಂಜು ಹಲಗೆ, ಬಿ.ಎನ್ ಮುಗಳಿ ಇತರರು ಇದ್ದರು.