ಕಾಮತ್ ದಂಪತಿ ಮುಂಬಯಿ ವಾಸಿಗಳು. ಅವರ ಹೆಣ್ಣು ಮಗುವಿನ ಹೆಸರು ಟಿಯಾರಾ. ಅದಕ್ಕಿನ್ನೂ ಎರಡು ತಿಂಗಳು. ಆ ಮಗುವಿಗೆ ಅಪರೂಪದ ದೋಷ. ಮಾಂಸ ಖಂಡಗಳು ಸರಿಯಾಗಿ ಬೆಳೆಯುವುದಿಲ್ಲ ಮತ್ತು ಅವುಗಳ ಮೇಲೆ ನಿಯಂತ್ರಣವೂ ಇಲ್ಲ. ಬಹಳ ಅಪರೂಪದ ದೋಷ ಇದು. ಇದಕ್ಕೆ ಚಿಕಿತ್ಸೆ ಇಲ್ಲದೇ ಇಲ್ಲ. ವಿದೇಶದಿಂದ ಇಂಜೆಕ್ಷನ್ ತರಿಸಿ ಮಗುವಿಗೆ ಕೊಡಬೇಕು. ಅದಕ್ಕೆ ತಗಲುವ ವೆಚ್ಚ 16 ಕೋಟಿ ರೂಪಾಯಿ ಮತ್ತು ಅದಕ್ಕೆ ತೆರಬೇಕಾದ ಆಮದು ಸುಂಕ ಆರು ಕೋಟಿ ರೂಪಾಯಿ. ಅಂದರೆ ಒಟ್ಟು ಖರ್ಚು ಇಪ್ಪತ್ತೆರಡು ಕೋಟಿ ರೂಪಾಯಿ. ಬಡ ಮಧ್ಯಮ ವರ್ಗದ ಕಾಮತ್ ದಂಪತಿಗಳಿಗೆ ಅಷ್ಟೊಂದು ಹಣ ಹೊಂದಿಸುವುದು ಅಸಾಧ್ಯ. ಹಾಗೆಂದು ಕರುಳ ಕುಡಿಯನ್ನು ಬಲಿ ಕೊಡಲಾಗದು. ಒಂದು ಚಿಕಿತ್ಸೆ ಲಭ್ಯ ಇದೆ ಎಂದ ಮೇಲೂ ಅದನ್ನು ಕೊಡಿಸಲು ಸಾಧ್ಯ ಆಗದ ಸ್ಥಿತಿಯಲ್ಲಿ ಅವರಿದ್ದರು.
ವಿಷಯ ತಿಳಿದ ಹಲವರು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದರು. ಕಾಮತ್ ದಂಪತಿಗಳು ಮಗುವಿನ ಚಿಕಿತ್ಸಾ ವೆಚ್ಚ ಭರಿಸಲು ಸಾಮೂಹಿಕ ನೆರವು ಕೋರಲು ನಿರ್ಧರಿಸಿದರು. ವಿನಂತಿ ಪ್ರಕಟ ಆದ ಮೇಲೆ ಭಾರತದಿಂದ ಮಾತ್ರವಲ್ಲದೇ ಇತರ 12 ದೇಶಗಳಿಂದ ನೆರವಿನ ಮಹಾಪೂರವೇ ಹರಿದು ಬಂದಿದೆ. ಸಾವಿರಾರು ಜನ ದೇಣಿಗೆ ನೀಡಿದ್ದಾರೆ. ಅದರಲ್ಲಿ ಕೇವಲ ನೂರು ರೂಪಾಯಿ ಕಳುಹಿಸಿದವರೂ ಇದ್ದಾರೆ, ಹಾಗೇ ಲಕ್ಷಾಂತರ ರೂಪಾಯಿ ನೀಡಿದವರೂ ಇದ್ದಾರೆ. ಕೊಟ್ಟ ಮೊತ್ತ ಮುಖ್ಯ ಅಲ್ಲ ಕೊಡುವ ಮನಸ್ಸು ಮುಖ್ಯ ಎಂದು ಸಾಬೀತು ಮಾಡಿದ ಘಟನೆ ಇದು. ವಿಷಯ ತಿಳಿದ ಕೇಂದ್ರ ಸರ್ಕಾರ ಔಷಧಿ ಮೇಲಿನ ಸುಂಕ ಆರು ಕೋಟಿ ರೂಪಾಯಿ ರದ್ದು ಮಾಡಲು ನಿರ್ಧರಿಸಿದೆ. ದೇಶ ವಿದೇಶಗಳ ಸಾವಿರಾರು ಜನರ ಸಾಮೂಹಿಕ ನೆರವಿನಿಂದ ಸುಂಕ ಹೊರತುಪಡಿಸಿ ಚಿಕಿತ್ಸೆಗೆ ಬೇಕಾದ 16 ಕೋಟಿ ರೂ. ಸಂಗ್ರಹ ಆಗಿವೆ. ಎಳೆಯ ಜೀವ ಆರೋಗ್ಯ ಪಡೆದು ನಲಿಯುವ ಭಾಗ್ಯ ಪಡೆದ ಅವಿಸ್ಮರಣೀಯ ಘಟನೆ ಇದು.
ನೆರವು ನೀಡಿದ ಎಲ್ಲರಿಗೂ ಮಗುವಿನ ತಾಯಿ ಕೃತಜ್ಞತೆ ಹೇಳಿದ್ದಾರೆ. ಅವರ ನೆರವನ್ನು ಕೃತಜ್ಞತೆಯಿಂದ ಸ್ಮರಿಸಿದ್ದಾರೆ. ತಮ್ಮ ಮಗುವಿಗಾಗಿ ಮಿಡಿದ ಹೃದಯಗಳಿಂದ ಅವರ ಮನಸ್ಸು ತುಂಬಿದೆ. ಮಧ್ಯಮ ವರ್ಗದ ಕಾಮತ್ ಹೇಳಿಕೆ ನೀಡಿ, ತಾವು ಮಗುವಿನ ಸಣ್ಣ ಪುಟ್ಟ ಆರೋಗ್ಯದ ತೊಂದರೆ ಗಮನಿಸುವಷ್ಟು ಹಣ ಹೊಂದಿದ್ದೆ. ಆದರೆ ಇಷ್ಟೊಂದು ಭಾರಿ ಮೊತ್ತದ ಚಿಕಿತ್ಸೆಗೆ ನಾವು ಸಿದ್ಧರಿರಲಿಲ್ಲ. ನಮ್ಮಲ್ಲಿ ಅದಕ್ಕಾಗಿ ಸಂಪನ್ಮೂಲ ಕ್ರೋಢೀಕರಿಸಲು ಸಾಧ್ಯವೂ ಇರಲಿಲ್ಲ. ಜನರ ನೆರವು ಮಗುವಿಗೆ ವರವಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.
ತಾಯಿ, ತಂದೆ ತಮ್ಮ ಮಗುವಿಗಾಗಿ ಸ್ಪಂದಿಸುವುದು ಸಹಜ. ಆದರೆ ಇಲ್ಲೊಂದು ಹನ್ನೊಂದು ವರ್ಷದ ಮಗು ತನ್ನ ತಾಯಿಯ ಉಳಿವಿಗಾಗಿ ಪ್ರಾರ್ಥಿಸಿದ ಘಟನೆ ಇದೆ. ಆ ಬಾಲಕನ ತಾಯಿ ಶಬನಮ್. ಸ್ನಾತಕೋತ್ತರ ಪದವೀಧರೆ. ಆಕೆಗೆ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ. ನಾನಾ ಹಂತದ ನ್ಯಾಯಾಲಯಗಳಲ್ಲಿಯೂ ಶಿಕ್ಷೆ ಖಾಯಂ ಆಗಿದೆ. ಸುಪ್ರೀಮ ಕೋರ್ಟ ಕೂಡ ಇದಕ್ಕೆ ಅಸ್ತು ಎಂದಿದೆ. ರಾಷ್ಟ್ರಪತಿಗಳು ಕೂಡ ಕ್ಷಮಾದಾನ ನಿರಾಕರಿಸಿದ್ದಾರೆ. ಕಳೆದ ಮಾರ್ಚನಲ್ಲಿಯೇ ಈಕೆಗೆ ಗಲ್ಲು ಶಿಕÉ್ಷ ಜಾರಿ ಆಗಬೇಕಿತ್ತು. ಕೊರೋನಾ ಕಾರಣ ಅದು ಮುಂದೆ ಹೋಗಿದೆ. ಈಕೆಗೆ ಮರಣ ದಂಡನೆ ಶಿಕ್ಷೆ ಜಾರಿ ಆದಲ್ಲಿ, ಭಾರತದಲ್ಲಿ ಗಲ್ಲು ಶಿಕ್ಷೆಗೆ ಒಳಗಾದ ಮೊದಲ ಮಹಿಳೆ ಆಗಲಿದ್ದಾಳೆ. ಅದಕ್ಕಾಗಿ ಮಥುರಾದ ಜೈಲಿನಲ್ಲಿ ಸಿದ್ಧತೆಗಳು ನಡೆದಿವೆ.
ಮಧ್ಯ ಪ್ರದೇಶದ ಆಮ್ರೋಹಿ ಜಿಲ್ಲೆಯ ಶಬನಮ್ ತನ್ನ ತಂದೆ ತಾಯಿ, ಏಳು ತಿಂಗಳ ಹಸುಗೂಸು ಸೇರಿ ಏಳು ಜನರನ್ನು ಬರ್ಬರವಾಗಿ ಕೊಡಲಿಯಿಂz ಕೊಚ್ಚಿ ಕೊಂದÀ ಆರೋಪ ಆಕೆಯ ಮೇಲಿದೆ. ತನ್ನ ಪ್ರಿಯಕರನ ಜೊತೆ ಸೇರಿ ಕುಟುಂಬದ ಸದಸ್ಯರಿಗೆ ನಶೆ ಬರುವ ಪದಾರ್ಥಗಳನ್ನು ಪಾನೀಯದಲ್ಲಿ ಬೆರೆಸಿ ಕುಡಿಸಿ, ಅನಂತರ ಬರ್ಬರವಾಗಿ ಕೊಲೆ ಮಾಡಿದ್ದು ವಿಚಾರಣೆ ವೇಳೆ ಸಾಬೀತಾಗಿದೆ. ಅಪರೂಪದಲ್ಲಿ ಅಪರೂಪ ಎನಿಸುವ ಈ ಪ್ರಕರಣ ಪರಿಗಣಿಸಿದ ನ್ಯಾಯಾಲಯವು ಆಕೆ ಮಹಿಳೆ ಎನ್ನುವ ಕಾರಣಕ್ಕೆ ರಿಯಾಯತಿ ತೋರದೇ ಮರಣದಂಡನೆ ಶಿಕ್ಷೆ ವಿಧಿಸಿದೆ.
ಆಕೆ ಜೈಲು ಪಾಲಾದಾಗ ಗರ್ಭಿಣಿಯಾಗಿದ್ದಳು. ಅಲ್ಲಿಯೇ ಹುಟ್ಟಿದ ಮಗನಿಗೆ ಈಗ ಹನ್ನೊಂದು ವರ್ಷ. ಜೈಲಲ್ಲಿ ಕೈದಿಯನ್ನು ಭೇಟಿ ಮಾಡಲು ಹೋಗುತ್ತಿದ್ದ ಪತ್ರಕರ್ತ ಉಸ್ಮಾನ್ ಆ ಮಗುವನ್ನು ಮನೆಗೆ ತಂದು ಸಾಕುತ್ತಾ ಇದ್ದಾರೆ. ಒಳ್ಳೆಯ ಶಿಕ್ಷಣ ಕೊಡಿಸಿ, ಆತನನ್ನು ಉತ್ತಮ ನಾಗರೀಕನಾಗಿ ಮಾಡಬೇಕೆಂಬ ಹಂಬಲ ಅವರದು. ತಾಯಿ ತಪ್ಪು ಮಾಡಿದ್ದಾಳೆ ನಿಜ, ಆದರೆ ಆಕೆಯ ಮಗ ಏನು ತಪ್ಪು ಮಾಡಿದ್ದಾನೆ ಎಂದು ತಾಯಿಯನ್ನು ಕಳೆದುಕೊಳ್ಳುವ ಶಿಕ್ಷೆ ಏಕೆ, ಅದರ ಬದಲು ಆಕೆಗೆ ಆಜೀವ ಕಾರಾಗೃಹ ವಾಸ ವಿಧಿಸಿದರೆ ಸಮಾಧಾನ ಇರುತ್ತದೆ ಎಂದು ಆಕೆಯ ಮಗ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾನೆ. ‘ರಾಷ್ಟ್ರಪತಿ ಅಂಕಲ್ ಜೀ’ ಎಂದು ತನ್ನ ಕೈ ಬರಹದಲ್ಲಿ ಬರೆದಿರುವ ಆತ, ತನ್ನ ತಾಯಿಗೆ ಕ್ಷಮಾದಾನ ಮಾಡುವಂತೆ ಕೋರಿದ್ದಾನೆ.
ಇದಕ್ಕೆ ಯಾವ ರೀತಿಯ ಸ್ಪಂದನೆ ದೊರೆಯುತ್ತದೆಯೋ ತಿಳಿಯದು. ಮಗುವಿಗಾಗಿ ತಾಯಿಯ ಹಂಬಲ ಒಂದು ಕಡೆಯಾದರೆ, ತಾಯಿಗಾಗಿ ಮಗುವಿನ ಹಂಬಲ ಇನ್ನೊಂದು ಕಡೆ. ಎರಡೂ ವಿಚಿತ್ರ ಮಾನವೀಯ ಸನ್ನಿವೇಶಗಳು. ನಮ್ಮಲ್ಲಿ ಯಾವುದೇ ಸಂದರ್ಭಕ್ಕೆ ಸ್ಪಂದಿಸುವುದಕ್ಕಿಂತ ಪ್ರತಿಕ್ರಿಯೆ ನೀಡಿ ಸುಮ್ಮನಾಗುವುದು ಅಭ್ಯಾಸ. ಆದರೆ ಟಿಯಾರಾ ಪ್ರಕರಣದಲ್ಲಿ ದೇಶ ಮತ್ತು ಜಗತ್ತು ಸ್ಪಂದಿಸಿರುವ ರೀತಿ ಗಮನಿಸಿದರೆ, ಮಾನವೀಯ ಸೆಲೆ ಇನ್ನೂ ಬತ್ತಿಲ್ಲ ಎಂದು ರುಜುವಾತಾಗುತ್ತದೆ. ಅದರಲ್ಲೂ ಸಣ್ಣ ಮೊತ್ತವಾದರೂ ಹನಿ ಹನಿಗೂಡಿದರೆ ಹಳ್ಳ ಎಂಬಂತೆ ತನ್ನ ಪಾಲಿನ ಕೊಡುಗೆ ನೀಡಲು ಮುಂದಾದವರ ಕೃತ್ಯ ನಿಜಕ್ಕೂ ಅಭಿನಂದನೀಯ. ಈಗ ಗಲ್ಲು ಶಿಕ್ಷೆಗೆ ಕಾದಿರುವ ತಾಯಿಯನ್ನು ಮಗ ಉಳಿಸಿಕೊಳ್ಳಲು ಸಾಧ್ಯವೇ ಕಾದು ನೋಡಬೇಕಿದೆ.
ಮಾನವೀಯ ಸ್ಪಂದನಗಳೇ ಮರೆ ಆಗುತ್ತಿರುವ ಇಂದಿನ ಸಂದರ್ಭದಲ್ಲಿ ಎರಡು ಅಪರೂಪದ ಪ್ರಸಂಗಗಳು ನಮ್ಮ ಕಣ್ಣ ಮುಂದೆ ಇವೆ. ಒಂದು ಮಗುವಿಗಾಗಿ ನೂರಾರು ಕೋಟಿ ಜನರ ಈ ನಾಡಲ್ಲಿ ಮಿಡಿದ ಸಹಸ್ರಾರು ಹೃದಯಗಳು ಈ ನಾಡಿನ ಮಾನವೀಯ ಸ್ಪಂದನದ ಸೆಲೆ ಬತ್ತಿಲ್ಲ ಎಂದು ತೋರಿಸಿ ಕೊಟ್ಟಿದ್ದಾರೆ. ಅಂಥವರೇ ಈ ದೇಶದ ಆಶಾಕಿರಣ, ಮುಂದಿನ ಬದುಕಿಗೆ ದಾರಿದೀಪ.