ಭುವನೇಶ್ವರ್: ಫೆ 20- ಅಪರಾಧಗಳ ಮೇಲೆ ರಾಜಕೀಯ ಮಾಡುವುದು, ಸರ್ಕಾರಿ ಕಾರ್ಯಕ್ರಮಗಳಿಗೆ ಚುನಾವಣಾ ಬಣ್ಣ ಹಚ್ಚುವುದು ದೇಶದ ಅಭಿವೃದ್ಧಿಗೆ, ಶಾಂತಿ ಭದ್ರತೆಗೆ ಅಪಾಯಕಾರಿ ಎಂದು ಒಡಿಶಾ ಮುಖ್ಯಮಂತ್ರಿ ನವೀನ ಪಟ್ನಾಯಕ್ ಶನಿವಾರ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಆಡಳಿತ ಮಂಡಳಿಯ ಸಭೆಯಲ್ಲಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪಟ್ನಾಯಕ್ ಮಾತನಾಡುತ್ತಾ, ಚುನಾವಣಾ ಮನಸ್ಥಿತಿಯಿಂದ ದೇಶ ಹೊರಬರುವ ಅವಶ್ಯಕತೆಯಿದೆ ಎಂದು ಹೇಳಿದರು.
“ ಇಂದು ನಾವು ಎಲ್ಲಿನೋಡಿದರೂ ಪ್ರತಿಯೊಂದು ಅಪರಾಧವನ್ನೂ ರಾಜಕೀಯಮಯಗೊಳಿಸಲಾಗುತ್ತಿದೆ. ಸರ್ಕಾರ ಕೈಗೊಳ್ಳುವ ಪ್ರತಿಯೊಂದು ಕಾರ್ಯಕ್ರಮವನ್ನು ಚುನಾವಣಾ ದೃಷ್ಟಿಕೋನದಿಂದ ನೋಡಲಾಗುತ್ತದೆ. ಈ ರೀತಿಯ ವಾತಾವರಣ ಅಭಿವೃದ್ಧಿಗೆ, ಶಾಂತಿ ಭದ್ರತೆಗೆ ಪ್ರಮುಖ ಅಡಚಣೆಯಾಗಿದೆ. ಇನ್ನಾದರೂ … ದೇಶ ಚುನಾವಣಾ ಮನಸ್ಥಿತಿಯಿಂದ ಹೊರಬರಬೇಕಿದೆ. ಸರ್ಕಾರಗಳು ಸಹಜವಾಗಿ ಕಾರ್ಯನಿರ್ವಹಿಸಬೇಕಾಗಿದೆ, ಪಕ್ಷಾತೀತವಾಗಿ ಜನರಿಗಾಗಿ ಕೆಲಸ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವ ಬಲಗೊಳ್ಳಲಿದೆ. ನಾವು ಹಾಗೇ ಮಾಡಲು ಸಮರ್ಥರಾಗಿದ್ದೇವೆಯೇ ಎಂದು ಆತ್ಮಾವಲೋಕನ ಮಾಡುವ ಸಮಯ ಬಂದಿದೆ, ”ಎಂದು ಪಟ್ನಾಯಿಕ್ ಹೇಳಿದರು.
ಇಡೀ ಪ್ರಪಂಚಕ್ಕೆ ಕೋವಿಡ್ – 19 ಸವಾಲು ಒಡ್ಡಿದೆ.ಆದರೆ, ಭಾರತ ಬೆದರಿಕೆಯನ್ನು ಒಗ್ಗಟ್ಟಿನಿಂದ ಎದುರಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು. ಕರೊನಾದಂತಹ ಕಠಿಣ ಸಂದರ್ಭಗಳಲ್ಲಿ ರಾಜಕೀಯ ಪರಿಗಣನೆ ಮೀರಿ ಭಾರತ ನಡೆಸಿದ ಹೋರಾಟ ಇತಿಹಾಸದಲ್ಲಿ ಶಾಶ್ವತವಾಗಿ ಉಳಿದುಕೊಳ್ಳಲಿದೆ ಅವರು ಶ್ಲಾಘಿಸಿದರು.