ಬೆಂಗಳೂರು: ಫೆ.20- ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಗಿ ಕ್ರಮ ಕೈಗೊಳ್ಳುವುದು ಅನಿವಾರ್ಯ, ಜೊತೆಗೆ ಮತ್ತೆ ಲಾಕ್ ಡೌನ್ ಅಥವಾ ನೈಟ್ ಕರ್ಫ್ಯೂ ಮರುಜಾರಿಗೊಳಿಸುವ ಯಾವುದೇ ಚಿಂತನೆ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಸ್ಪಷ್ಟಪಡಿಸಿದ್ದಾರೆ.
ಎರಡೂ ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ 10 ಜಿಲ್ಲೆಗಳಲ್ಲಿ ಹೆಚ್ಚು ನಿಗಾ ವಹಿಸಬೇಕಾಗಿದೆಯಾದರೂ ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಮಾಡುವ ಪರಿಸ್ಥಿತಿಯಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಮಾರ್ಚ್ ನಲ್ಲಿ ಜನಸಾಮಾನ್ಯರಿಗೂ ಲಸಿಕೆ ಸಿಗಲಿದೆ ಎಂದು ಸುಧಾಕರ್ ಹೇಳಿದರು.
ಆರ್ ಟಿಪಿಸಿಆರ್ ನೆಗೆಟೀವ್ ರಿಪೋರ್ಟ್ ಇಲ್ಲದ ಯಾವುದೇ ಜನರನ್ನು ಮಹಾರಾಷ್ಟ್ರ ಮತ್ತು ಕೇರಳದಿಂದ ಕರ್ನಾಟಕಕ್ಕೆ ಕಡ್ಡಾಯವಾಗಿ ಪ್ರವೇಶ ನೀಡದಂತೆ ತಾಂತ್ರಿಕ ಸಲಹಾ ಸಮಿತಿಯು ಸಲಹೆ ಶಿಫಾರಸ್ ಮಾಡಿದೆ ಈ ಸಂಬಂಧ ಗೃಹ ಇಲಾಖೆಯೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕೋವಿಡ್ ಲಸಿಕೆ ತೆಗೆದುಕೊಳ್ಳಲು ಆರೋಗ್ಯ ಇಲಾಖೆಯ ಕೊರೋನಾ ವಾರಿಯರ್ಸ್ ಗಳು ಹಿಂಜರಿಯುತ್ತಿದ್ದಾರೆ.ಶೇ.50ರಷ್ಟು ಮಂದಿ ಮಾತ್ರ ಲಸಿಕೆ ತೆಗೆದುಕೊಂಡಿದ್ದಾರೆ.ಇದುವರೆಗೆ ಫ್ರಂಟ್ಲೈನ್ ವಾರಿಯರ್ಸ್ ಗಳು ಹಿರಿಯ ಅಧಿಕಾರಿಗಳು ಲಸಿಕೆ ತೆಗೆದುಕೊಂಡು ಮಾದರಿಯಾಗಿದ್ದಾರೆ. ಯಾವುದೋ ವದಂತಿಗಳನ್ನು ನಂಬಿ ಬಲಿಪಶುಗಳಾಗಬಾರದು. ಉಳಿದವರು ಹಿಂದೆ ಮುಂದೆ ನೋಡದೆ ತೆಗೆದುಕೊಳ್ಳಲು ಮುಂದೆ ಬರಬೇಕು ಎಂದರು.
ಲಸಿಕೆ ತೆಗೆದುಕೊಳ್ಳದೇ ಇದ್ದರೆ ಜನಸಾಮಾನ್ಯರ ಪಾಡೇನು ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ತಮ್ಮ ಇಲಾಖೆಯ ಸಿಬ್ಬಂದಿಗಳಿಗೆ ತಿಳಿ ಹೇಳಿದರು.ಇಲಾಖೆಯ 1,12,558 ಸಿಬ್ಬಂದಿ ಲಸಿಕೆ ತೆಗೆದುಕೊಂಡಿದ್ದು,ನೋಂದಣಿ ಮಾಡಿಕೊಂಡವರು ಹೆಚ್ಚಿದ್ದಾರೆಇಲ್ಲಿಯವರೆಗೆ 6,12,018 ಲಸಿಕೆ ನೀಡಲಾಗಿದೆ . ದೇಶದಲ್ಲಿ ಲಸಿಕೆ ನೀಡಿಕೆಯಲ್ಲಿ ಕರ್ನಾಟಕವೇ ಮೊದಲನೇ ಸ್ಥಾನದಲ್ಲಿದೆ ಎಂದರು.
ಮಹಾರಾಷ್ಟ್ರ, ಕೇರಳದಲ್ಲಿ ಕೋವಿಡ್ ಹೆಚ್ಚಾಗಿದೆ.ಕಳೆದೊಂದು ವಾರದಿಂದ ಈ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ.ಕೇರಳವೊಂದರಲ್ಲಿಯೇ ಶುಕ್ರವಾರ 5405 ಪ್ರಕರಣಗಳು ದಾಖಲಾಗಿವೆ.ಸಕ್ರಿಯ ಪ್ರಕರಣ 60 ಸಾವಿರ ಇದ್ದು ಅಲ್ಲಿ ಪ್ರತಿದಿನ 15 ಜನ ಸಾವನ್ನಪ್ಪುತ್ತಿದ್ದಾರೆ.ಇನ್ನು ಮಹಾರಾಷ್ಟ್ರ ದಲ್ಲಿ ಶುಕ್ರವಾರ 6112 ಪ್ರಕರಣ ದಾಖಲಾಗಿದ್ದು,ಒಂದೇ ದಿನ 44 ಜನ ಮೃತಪಟ್ಟಿದ್ದಾರೆ.ಹೀಗಾಗಿ ನಾವು ಎಚ್ಚರವಹಿಸಬೇಕಿದೆ. ರಾಜ್ಯದ 10 ಜಿಲ್ಲೆಗಳು ಈ ಎರಡು ರಾಜ್ಯದ ಗಡಿ ಹಂಚಿಕೊಂಡಿವೆ.
ಬೆಳಗಾವಿ, ಮೈಸೂರು, ಚಾಮರಾಜನಗರ, ಮಂಗಳೂರು,ಉಡುಪಿ,ವಿಜಯಪುರ ಗಡಿ ಭಾಗದಲ್ಲಿವೆ.ಮಹಾರಾಷ್ಟ್ರ, ಕೇರಳ ಗಡಿ ಭಾಗದಲ್ಲಿವೆ.ಹೀಗಾಗಿ ಅಲ್ಲಿನ ಹೆಚ್ಚಿನ ನಿಗಾವಹಿಸಿದ್ದೇವೆ.ಎರಡು ರಾಜ್ಯಗಳಿಂದ ಬರುವವರ ಮೇಲೆ ತೀವ್ರ ನಿಗಾ ವಹಿಸಿ,ಅಲ್ಲಿಂದ ಬರುವವರಿಗೆ ಆರ್ ಟಿಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ ಕಂದಾಯ,ಗೃಹ,ಆರೋಗ್ಯ ಇಲಾಖೆ ಒಂದುಗೂಡಿ ನಿರ್ಧಾರ ಕೈಗೊಂಡಿದ್ದೇವೆ ಎಂದರು.
ಸೋಂಕುಹೆಚ್ಚಳದ ಮೇಲೆ ನಿಗಾ ವಹಿಸುತ್ತೇವೆ.ರಾಜ್ಯದಲ್ಲಿ ಲಾಕ್ ಡೌನ್ ಅಥವಾ ನೈಟ್ ಕರ್ಫ್ಯೂ ಮರುಜಾರಿಗೊಳಿಸುವ ಯಾವುದೇ ಚಿಂತನೆ ಇಲ್ಲ.ಅಂತಹ ಪರಿಸ್ಥಿತಿ ತಂದುಕೊಳ್ಳುವುದು ಬೇಡ.ಅದಕ್ಕೆ ನಾವು ಜನರಿಗೆ ಮನವಿ ಮಾಡುತ್ತೇವೆ..
ಮೊದಲ -ಎರಡನೇ ಹಂತದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದ್ದರೆ ಸೋಂಕು ಬರಬಹುದು.ಆದರೆ ಸಾವಿನ ಪ್ರಮಾಣ ಕಡಿಮೆ ಎಂದು ಸುಧಾಕರ್ ವಿವರಿಸಿದರು.