ಬೆಂಗಳೂರು: ಫೆ.20- ರಾಜ್ಯದಲ್ಲಿ ನಿರುದ್ಯೋಗ ದೇಶದಲ್ಲೇ ಅತ್ಯಂತ ಕನಿಷ್ಠ ಪ್ರಮಾಣ ಅಂದರೆ ಸುಮಾರು ಶೇ. 3.6 ರಷ್ಟಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ನೀತಿ ಆಯೋಗದ ಆಡಳಿತ ಮಂಡಳಿಯ 6ನೇ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾಗವಹಿಸಿ,. ರಾಜ್ಯಕ್ಕೆ ಸಂಬಂಧಿಸಿದಂತೆ ವಿಚಾರ ವಿನಿಮಯ ನಡೆಸಿದರು.
ಸಭೆಯಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಉತ್ಪಾದನಾ ವಲಯದ ಪ್ರಮುಖ ತಾಣವಾಗಿ ರೂಪಿಸುವುದು, ಕೃಷಿ ವಲಯಕ್ಕೆ ಹೊಸ ಸ್ವರೂಪ ನೀಡುವುದು, ಭೌತಿಕ ಮೂಲಸೌಕ ರ್ಯಗಳ ಸುಧಾರಣೆ, ಮಾನವ ಸಂಪನ್ಮೂಲ ಅಭಿವೃದ್ಧಿ, ತಳಮಟ್ಟದಲ್ಲಿ ದಕ್ಷ ನಾಗರಿಕ ಸೇವಾ ಸೌಲಭ್ಯ ಒದಗಿಸುವುದು,ಆರೋಗ್ಯ ಮತ್ತು ಪೌಷ್ಟಿಕತೆ ಕುರಿತಾದ ವಿಷಯಗಳ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯದ ಕೆಲವು ಪ್ರಮುಖ ಅಂಶಗಳ ಕುರಿತು ಪ್ರಧಾನ ಮಂತ್ರಿಯವರ ಗಮನ ಸೆಳೆಯಲಾಯಿತು. ಕೋವಿಡ್ 19 ಸಾಂಕ್ರಾಮಿಕದ ಹೊರತಾಗಿಯೂ ರಾಜ್ಯದ ಹಣಕಾಸು ಪರಿಸ್ಥಿತಿ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆ 2002ರಲ್ಲಿ ನಿಗದಿಪಡಿಸಿದ ಮಾನದಂಡದ ಮಿತಿಯಲ್ಲಿಯೇ ಇದೆ.
ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಕೈಗೊಂಡಿರುವ ಕ್ರಮಗಳಲ್ಲಿ ಮುಖ್ಯವಾಗಿ ನೂತನ ಕೈಗಾರಿಕಾ ನೀತಿ 2020-25, ಅಫೀಡವಿಟ್ ಆಧಾರಿತ ಅನುಮೋದನಾ ವ್ಯವಸ್ಥೆ, ರಫ್ತು ಉತ್ತೇಜನಕ್ಕೆ ಕೈಗೊಂಡಿರುವ ಕ್ರಮಗಳು, ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುವ ಕುರಿತು ಅಮೇಜಾನ್ ಹಾಗೂ ಫ್ಲಿಪ್ ಕಾರ್ಟ್ ಇ-ಕಾಮರ್ಸ್ ಸಂಸ್ಥೆಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದ ಮೊದಲಾದ ಉಪಕ್ರಮಗಳ ಕುರಿತು ವಿವರಿಸಲಾಯಿತು.