ಬೆಂಗಳೂರು: ಫೆ 20 – ರಾಜ್ಯದ ಭದ್ರಾ ಮೇಲ್ದಂಡೆ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಆಡಳಿತ ಮಂಡಳಿಯ 6ನೇ ಸಭೆಯಲ್ಲಿ ಅವರು, ನದೀ ತಿರುವು ಯೋಜನೆಗಳಿಗೆ ಅನುದಾನ ಒದಗಿಸುವ ಹಾಗೂ ಕಾಲುವೆಗಳ ಆಧುನೀಕರಣ ಯೋಜನೆಯಡಿ ರಾಜ್ಯದಿಂದ 6673 ಕೋಟಿ ರೂ. ಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇವುಗಳಿಗೆ ಮಂಜೂರಾತಿ ನೀಡುವಂತೆ ಕೋರಿದರು.
ಖಾಸಗಿ ಸಹಭಾಗಿತ್ವದಲ್ಲಿ 3 ಬಂದರುಗಳ ಅಭಿವೃದ್ಧಿ, ರೈಲ್ವೆಯೊಂದಿಗೆ ಜಂಟಿ ಪಾಲುದಾರಿಕೆಯಲ್ಲಿ ಬೆಂಗಳೂರು ಉಪ ನಗರ ರೈಲು ಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಕಾನೂನು ತೊಡಕುಗಳು ಮತ್ತು ಪರಿಸರ ಹೋರಾಟಗಳ ಹಿನ್ನೆಲೆಯಲ್ಲಿ ಮೂಲಸೌಕರ್ಯ ಯೋಜನೆಗಳು ವಿಳಂಬವಾಗುತ್ತಿದ್ದು, ಇಂತಹ ವ್ಯಾಜ್ಯಗಳ ತ್ವರಿತ ವಿಲೇವಾರಿಗೆ ವ್ಯವಸ್ಥೆ ರೂಪಿಸುವಂತೆ ಮನವಿ ಮಾಡಿದರು.
ನೂತನ ಶಿಕ್ಷಣ ನೀತಿಯ ಅನುಷ್ಠಾನಕ್ಕಾಗಿ ಕೈಗೊಳ್ಳಬೇಕಾಗಿರುವ ಹಲವು ಉಪಕ್ರಮಗಳಿಗೆ ಕೇಂದ್ರ ಸರ್ಕಾರದ ಆರ್ಥಿಕ ನೆರವು ಅಗತ್ಯವಾಗಿದೆ. ಎಲ್ಲ ಸರ್ಕಾರಿ ಕಚೇರಿಗಳಿಗೆ ಇಂಟರ್ನೆಟ್ ಸೌಲಭ್ಯ ಒದಗಿಸಲು ಒಪ್ಟಿಕಲ್ ಫೈಬರ್ ನೆಟ್ ವರ್ಕ್ ರೂಪಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ಕೇಂದ್ರದಿಂದ 4300 ಕೋಟಿ ರೂ. ನೆರವು ಒದಗಿಸುವಂತೆ ಯಡಿಯೂರಪ್ಪ ಮನವಿ ಮಾಡಿದರು.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಯಡಿಯೂರಪ್ಪ, ಭಾರತವನ್ನು ಜಾಗತಿಕ ಮಟ್ಟದಲ್ಲಿ ಉತ್ಪಾದನಾ ವಲಯದ ಪ್ರಮುಖ ತಾಣವಾಗಿ ರೂಪಿಸುವುದು, ಕೃಷಿ ವಲಯಕ್ಕೆ ಹೊಸ ಸ್ವರೂಪ ನೀಡುವುದು, ಭೌತಿಕ ಮೂಲಸೌಕರ್ಯಗಳ ಸುಧಾರಣೆ, ಮಾನವ ಸಂಪನ್ಮೂಲ ಅಭಿವೃದ್ಧಿ, ತಳಮಟ್ಟದಲ್ಲಿ ದಕ್ಷ ನಾಗರಿಕ ಸೇವಾ ಸೌಲಭ್ಯ ಒದಗಿಸುವುದು, ಆರೋಗ್ಯ ಮತ್ತು ಪೌಷ್ಟಿಕತೆ ಕುರಿತಾದ ವಿಷಯಗಳ ಕುರಿತು ಚರ್ಚಿಸಲಾಗಿದೆ ಎಂದಿದ್ದಾರೆ.
ಕೋವಿಡ್ 19 ಸಾಂಕ್ರಾಮಿಕದ ಹೊರತಾಗಿಯೂ ರಾಜ್ಯದ ಹಣಕಾಸು ಪರಿಸ್ಥಿತಿ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆ 2002 ರಲ್ಲಿ ನಿಗದಿಪಡಿಸಿದ ಮಾನದಂಡದ ಮಿತಿಯಲ್ಲಿಯೇ ಇದೆ ಎಂದು ಸಭೆಯಲ್ಲಿ ಮಾಹಿತಿ ನೀಡಿರುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.