ಬೆಂಗಳೂರು: ಫೆ 22 – ಕೋವಿಡ್ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಆರೋಗ್ಯ ಇಲಾಖೆ ಇನ್ನುಮುಂದೆ ವಿವಾಹ ಸಮಾರಂಭಗಳಿಗೆ ಮಾರ್ಷಲ್ ಗಳನ್ನು ನಿಗಾವಹಿಸಲು ನೇಮಕ ಮಾಡಲಿದ್ದು ನಿಯಮ ಮೀರಿದರೆ ಸ್ಥಳದಲ್ಲೇ ದಂಡ ಬೀಳಲಿದೆ ಎಂದು ಆರೋಗ್ಯ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.
ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಮದುವೆ ಸಮಾರಂಭಗಳಿಗೆ ಹೆಚ್ಚಿನ ಜನಸಂಖ್ಯೆ ಸೇರುತ್ತಿದ್ದು, ಸಾಮಾಜಿಕ ಅಂತರ ಪರಿಪಾಲಿಸದೇ ಇರುವುದು, ಮಾಸ್ಕ್ ಧರಿಸದೇ ಇರುವುದು ಹೆಚ್ಚಾಗುತ್ತಿದೆ.ಇದರಿಂದ ಕೋವಿಡ್ ಸೋಂಕಿತರ ಪ್ರಮಾಣವೂ ಸಹ ಹೆಚ್ಚುತ್ತಿದೆ. ಹೀಗಾಗಿ 500 ಜನಕ್ಕಿಂತ ಹೆಚ್ಚಿನ ಜನರನ್ನು ಮದುವೆ ಸಮಾರಂಭಗಳಿಗೆ ಸೇರದಂತೆ ಆರೋಗ್ಯ ಇಲಾಖೆ ನಿರ್ಬಂಧ ಹೇರಿದ್ದು, ಮಾಸ್ಕ್ ಪತ್ತೆ, ಸಾಮಾಜಿಕ ಅಂತರ ವೀಕ್ಷಣೆಗೆ ಪ್ರತಿ ವಿವಾಹ ಕಾರ್ಯಕ್ರಮಕ್ಕೆ ಓರ್ವ ಮಾರ್ಷಲ್ ಗಳನ್ನು ನೇಮಕ ಮಾಡಲಾಗುವುದು.
ಮಾಸ್ಕ ಧರಿಸದೇ ಇದ್ದರೆ ಸ್ಥಳದಲ್ಲೇ ದಂಡ ವಸೂಲಿ ಮಾಡಲಾಗುತ್ತದೆ. ಮದುವೆ ಆಯೋಜಕರ ಮೇಲೂ ದಂಡ ಬೀಳಲಿದೆ. ಅಡುಗೆ ಮಾಡುವವರು ಬಾಣಸಿಗರ ಮೇಲೂ ಈ ಮಾರ್ಷಲ್ ಗಳು ನಿಗಾ ವಹಿಸಲಿದ್ದು, ಇವರೆಲ್ಲರೂ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಆರೋಗ್ಯ ಇಲಾಖೆ ಸುತ್ತೋಲೆಯಲ್ಲಿ ಹೇಳಲಾಗಿದೆ.
ಈ ನಡುವೆ ಸಚಿವ ಸುಧಾಕರ ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯ ಕೋವಿಡ್ ಲಸಿಕೆಯಲ್ಲಿ ಇದುವರೆಗೂ ಶೇ 52 ರಷ್ಟು ಸಾಧನೆ ಮಾಡಿದ್ದು,ಇದೇ 28 ರೊಳಗೆ ಶೇ.90 ರಷ್ಟು ಗುರಿ ಸಾಧಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದರು.