ಬೆಳಗಾವಿ: 22- ಕಳೆದ ಮಾರ್ಚ ತಿಂಗಳಲ್ಲಿ ದೇಶಕ್ಕೆ ಒಕ್ಕರಿಸಿದ ಕೊರೋನಾ ಮಹಾಮಾರಿ ಬೆಳಗಾವಿ ಜಿಲ್ಲೆಯನ್ನೂ ಇನ್ನಿಲ್ಲದಂತೆ ಕಾಡಿತ್ತು. ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ದಿನವೊಂದಕ್ಕೆ ಸರಾಸರಿ 500 ರ ಗಡಿ ದಾಟುತ್ತಿದ್ದ ಸೋಂಕಿತರ ಸಂಖ್ಯೆ ಈ ವರುಷದ ಆರಂಭದಿಂದ ಕ್ಷಿಣಿಸುತ್ತಿದ್ದು ಎರಡಂಕಿ ತಲುಪಿ ಇಂದು ಸೋಮವಾರ ಹೊಸ ದಾಖಲೆ ನಿರ್ಮಾಣವಾಗಿದೆ. ಇಂದು ಜಿಲ್ಲೆಯಲ್ಲಿ ಒಂದೂ ಪ್ರಕರಣ ಪತ್ತೆಯಾಗಿಲ್ಲ.
ಕಳೆದ ಏಪ್ರಿಲ್ ತಿಂಗಳಲ್ಲಿ ಬೆಳಗಾವಿಯಲ್ಲಿ ಮೊದಲ ಬಾರಿಗೆ 4 ಜನರಿಗೆ ಕೊರೋನಾ ಕಾಣಿಸಿಕೊಂಡ ನಂತರ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ರೋಗಿಗಳು ದಾಖಲಾಗುತ್ತಿದ್ದರು. ಈ ವರೆಗೆ 5,16,964 ಜನರ ಸ್ಯಾಂಪಲ್ ಪರೀಕ್ಷಿಸಲಾಗಿದ್ದು, 26,860 ಜನರಿಗೆ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. 342 ಜನರು ಸಾವಿಗೀಡಾಗಿದ್ದಾರೆ.
ಸಧ್ಯ ಆಸ್ಪತ್ರೆಯಲ್ಲಿ 76 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೆ ಮಹಾರಾಷ್ಟ್ರದಲ್ಲಿ ಕೊರೋನಾ 2ನೇ ಅಲೆ ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಆತಂಕ ಮನೆಮಾಡಿದೆ. ಜಿಲ್ಲೆಯ ಗಡಿಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ನಿನ್ನೆ 15 ಪ್ರಕರಣಗಳು ಕಂಡು ಬಂದಿದ್ದು ಅದರಲ್ಲಿ 8 ಜನರು ಮಹಾರಾಷ್ಟ್ರದಿಂದ ಬಂದವರಿದ್ದರು.
ಈ ಮಧ್ಯೆ ಇಂದು ಯಾವುದೇ ಪಾಸಿಟಿವ್ ಪ್ರಕರಣ ಕಾಣಿಸಿಕೊಳ್ಳದ್ದರಿಂದ ಜಿಲ್ಲೆಯ ಜನ ಸ್ವಲ್ಪಮಟ್ಟಿಗೆ ನಿಟ್ಟುಸಿರುವ ಬಿಡುವಂತಾಗಿದೆ.